ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಸದಸ್ಯರಾಗಿ

| Published : Sep 13 2024, 01:40 AM IST

ಸಾರಾಂಶ

ನಂಜನಗೂಡಿಗೂ ಅರಮನೆಗೂ ಕೂಡ ಮೊದಲಿನಿಂದಲೂ ನಿಕಟ ಸಂಬಂಧವಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ದೇಶದ ಪ್ರಜೆಗಳ ಬದುಕನ್ನು ಅಭಿವೃದ್ದಿಪಡಿಸುವ ದೂರದೃಷ್ಠಿ ಇಟ್ಟುಕೊಂಡು ಸಂವಿಧಾನಕ್ಕೆ ಆಶಯಗಳಿಗೆ ತಕ್ಕಂತೆ, ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದ್ದು, ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಸದಸ್ಯರಾಗಿ ಪಕ್ಷವನ್ನು ಬಲಪಡಿಸಿ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಪಟ್ಟಣದ ಅಶೋಕಪುರಂ, ರಾಜಾಜಿ ಕಾಲೋನಿ, ಶ್ರೀರಾಂಪುರ ಬಡಾವಣೆಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಂಜನಗೂಡಿಗೂ ಅರಮನೆಗೂ ಕೂಡ ಮೊದಲಿನಿಂದಲೂ ನಿಕಟ ಸಂಬಂಧವಿದೆ. ಆದ್ದರಿಂದಲೇ ಬಿಜೆಪಿ ಸದಸ್ಯತ್ವಕ್ಕೆ ನಂಜನಗೂಡಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಇನ್ನೂ ಗಟ್ಟಿಯಾಗಲಿದೆ. ಮೈಸೂರು ಸಂಸ್ಥಾನದ ರಾಜರು ಮುಂದಿನ ತಲೆ ಮಾರಿನ ಮೇಲೆ ಇದ್ದ ದೂರದೃಷ್ಟಿಯನ್ನಿಟ್ಟುಕೊಂಡು ಕಟ್ಟಿದ ಸಂಸ್ಥೆಗಳು ಈಗಲೂ ಸಹ ಸಮಾಜಕ್ಕೆ ಸೇವೆ ನೀಡುತ್ತಾ ಬಂದಿವೆ. ಆದ್ದರಿಂದಲೇ ಮೈಸೂರು ರಾಜರ ಮೇಲೆ ಈಗಲೂ ಜನರು ಗೌರವಿಟ್ಟುಕೊಂಡಿರುವುದು. ಕೆಲವರು ವಯಕ್ತಿಕ ಲಾಭಕ್ಕಾಗಿ ಅಧಿಕಾರದ ಹಿಂದೆ ಬೀಳುತ್ತಾರೆ. ಇದಕ್ಕೆಲ್ಲ ಪರಿಹಾರ ಬಿಜೆಪಿ ಪಕ್ಷವೊಂದೇ, ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿದ್ದು, ಮುಂದಿನ 23 ವರ್ಷಗಳಲ್ಲಿ ಜನರ ಬದುಕನ್ನು ಅಭಿವೃದ್ದಿಪಡಿಸಿ ವಿಕಸಿತ ಭಾರತವನ್ನಾಗಿ ರೂಪಿಸಬೇಕೆಂಬ ದೂರದೃಷ್ಟಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ನಮ್ಮ ದೇಶದ ಪರಂಪರೆಯ ಸಂರಕ್ಷಣೆ, ನಮ್ಮ ಮುಂದಿನ ತಲೆಮಾರುಗಳಿಗೆ ಲಾಭದಾಯಕವಾಗುವ ಕೆಲಸ ಮಾಡುವ ಸಲುವಾಗಿ ಎಲ್ಲರೂ ಬಿಜೆಪಿಗೆ ಲಿಂಕ್ ಮೂಲಕ ಸದಸ್ಯತ್ವ ಪಡೆದು ದೇಶವನ್ನು ಜಗತ್ತಿನಲ್ಲೇ ಶ್ರೇಷ್ಠ ಭಾರತವನ್ನಾಗಿ ನಿರ್ಮಿಸಲು ಕೈ ಜೋಡಿಸಿ ಎಂದು ಕರೆ ನೀಡಿದರು.

ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಪ್ರಧಾನಿ ಮೋದಿ ಅವರ ಸ್ವಚ್ಚ ಭಾರತ ಅಭಿಯಾನ ಇಡೀ ಪ್ರಪಂಚದಲ್ಲೇ ಸಂಚಲನ ಮೂಡಿಸಿದೆ, ಅಲ್ಲದೆ ಭಾರತ ದೇಶವನ್ನು ವಿಶ್ವಗುರುವನ್ನಾಗಿ ರೂಪಿಸಲು ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕೂಡ ಬಿಜೆಪಿ ಅಧಿಕಾರ ಹಿಡಿಯಲಿದೆ. ಆದ್ದರಿಂದ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಹಾಗೂ ಪಕ್ಷವನ್ನು ಬಲಗೊಳಿಸಲು ಹೆಚ್ಚು ಸದಸ್ಯರನ್ನು ನೊಂದಾಯಿಸಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಪ್ರತಿ 6 ವರ್ಷಗಳಿಗೊಮ್ಮೆ ಸದಸ್ಯರನ್ನು ಹೆಚ್ಚಿಸುವ ಕೆಲಸವಾಗಲಿದೆ. ಕಳೆದ 6 ದಿನಗಳಲ್ಲಿ ಸುಮಾರು 2.5 ಕೋಟಿ ಸದಸ್ಯರನ್ನು ನೊಂದಾವಣೆ ಮಾಡಲಾಗಿದೆ. ಪ್ರತಿ ಬೂತ್‌ ನಲ್ಲಿ ಸುಮಾರು 300ಕ್ಕೂ ಹೆಚ್ಚು ಸದಸ್ಯರನ್ನು ನೊಂದಾವಣೆ ಮಾಡಿ ಪಕ್ಷಕ್ಕೆ ಬಲತುಂಬಿ ಎಂದರು.

ಬಿಜೆಪಿ ರಾಜ್ಯ ಮುಖಂಡರಾದ ಎಸ್. ಮಹದೇವಯ್ಯ, ಕುಂಬ್ರಳ್ಳಿ ಸುಬ್ಬಣ್ಣ, ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು, ನಗರಸಭಾ ಸದಸ್ಯರಾದ ದೇವು, ಮಹದೇವಪ್ರಸಾದ್, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಚಂದ್ರ, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಎಸ್.ಎಂ. ಕೆಂಪಣ್ಣ, ಮಂಗಳಾ ಸೋಮಶೇಖರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಬಸವಣ್ಣ, ಮುಖಂಡರಾದ ಶ್ರೀನಿವಾಸರೆಡ್ಡಿ, ಶಂಕರಪ್ಪ, ಜಗದೀಶ್, ಗುರುಸ್ವಾಮಿ, ಸಂಜಯ್‌ ಶರ್ಮ, ಬಿಜೆಪಿ ಕಾರ್ಯಕರ್ತರು ಇದ್ದರು.