ಬಿಜೆಪಿ ಸಂಸದರು ಸಂಸತ್ತಲ್ಲಿ ರಾಜ್ಯದ ಪರ ಧ್ವನಿ ಎತ್ತಿಲ್ಲ

| Published : Apr 14 2024, 01:48 AM IST

ಸಾರಾಂಶ

ಬಿಜೆಪಿಯ 25 ಜನ ಸಂಸದರು 5 ವರ್ಷ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಲಿಲ್ಲ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಿಜೆಪಿಯ 25 ಜನ ಸಂಸದರು 5 ವರ್ಷ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಲಿಲ್ಲ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು.

ನಗರದ ಶ್ರೀದೇವಿ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿನಲ್ಲಿ ಶನಿವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲಕ್ಕಾಗಿ ನಡೆದ ಅಹಿಂದ ಸಮಾವೇಶದಲ್ಲಿ ಮಾತನಾಡಿ, ನಮ್ಮ ತೆರಿಗೆ ಪಾಲನ್ನು ಕೊಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ನಮ್ಮ ಜನರ ತೆರಿಗೆ ನಮಗೇ ನೀಡುತ್ತಿಲ್ಲ ಮತ್ತು ಬರ ಪರಿಹಾರದ ಹಣವನ್ನು ನೀಡಿಲ್ಲಾ. ಈ ಕುರಿತು ಬಿಜೆಪಿಯ 25 ಜನ ಸಂಸದರೂ ಪ್ರಧಾನಿ ಮೋದಿಯವರ ಬಳಿ ಚಕಾರ ಎತ್ತಿಲ್ಲಾ. ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬರ ಪರಿಹಾರವಾಗಿ ಈವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭ್ ಕಾ ಸಾಥ್ ಸಬ್ ಕಾ ವಿಖಾಸ್ ಎಂದು ಪ್ರಧಾನಿ ಮೋದಿ ಹೇಳುತ್ತಾರೆ ಆದರೆ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕು ಮೂರಾ ಬಟ್ಟೆ ಮಾಡಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. 2013-14 ರ ಅವದಿಯಲ್ಲಿ ಗ್ರಾಂ ಚಿನ್ನದ ಬೆಲೆ 2500 ರಿಂದ 2800 ರು. ಗಳಿತ್ತು. ಆದರೆ ಈಗ 7 ಸಾವಿರ ರು.ಗಳ ಗಡಿದಾಟಿದೆ, ಭಾರತದ ಹೆಣ್ಣು ಮಕ್ಕಳಿಗೆ ಗಂಡನ ಮೇಲಿನ ಪ್ರೀತಿಗಿಂತ ಚಿನ್ನದ ಮೇಲೆನೇ ಹೆಚ್ಚು ಪ್ರೀತಿ. ಅಂತಹ ಹೆಣ್ಣು ಮಕ್ಕಳು ಬಂಗಾರ ಕೊಳ್ಳಲು ಸಹಾ ಸಾಧ್ಯವಾಗದಂತೆ ಮಾಡಿದೆ ಎಂದರು.ಪ್ರಜಾಪ್ರಭುತ್ವ ರಾಜ್ಯದಲ್ಲಿ ರಾಜಕೀಯ, ಎಂದರೆ ಅದು ಧರ್ಮದಿಂದ ಅರ್ಥಶಾಸ್ತ್ರ, ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಧರ್ಮವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಧರ್ಮ ನಿರಪೇಕ್ಷತೆ ಬೋಧಿಸುತ್ತದೆ. ಧರ್ಮವು ವೈಯಕ್ತಿಕ ನಂಬಿಕೆಯ ವಿಷಯವಾಗಿರಬೇಕು. ಇದನ್ನು ಬಿಜೆಪಿ ಎಂದಿಗೂ ಪಾಲಿಸಿಲ್ಲ ಎಂದು ಹೇಳಿದರು.

ಯಾರಿಗೆ ಮತ ಹಾಕಬೇಕು ಯೋಚಿಸಿ:

ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ನರೇಂದ್ರ ಮೋದಿ ಅವರಿಗೆ ಮತ ಹಾಕಬೇಕೇ ಅಥವಾ ನುಡಿದಂತೆ ನಡೆದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೇ ಎಂಬುದನ್ನು ಮತದಾರರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಮತದಾರರಲ್ಲಿ ಮನವಿ ಮಾಡಿದರು.

ಗ್ಯಾರಂಟಿಗಳ ಅನುಷ್ಟಾನದ ಮುಖ್ಯಸ್ಥ ಹೆಚ್.ಎಂ.ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತಂದು ಸಿಎಂ ಸಿದ್ದರಾಮಯ್ಯ ತೋರಿಸಿದ್ದಾರೆ. ಅಂಥದ್ದೊಂದು ಐತಿಹಾಸಿಕ ಯೋಜನೆಯನ್ನು ರೂಪಿಸಿ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ರೈತರ, ಮಹಿಳೆಯರ ದಿನನಿತ್ಯದ ಬೇಗೆಗೆ ಬೆನ್ನೆಲುಬಾಗಿ ನಿಂತು ಅದನ್ನು ನಿವಾರಿಸುವ ಮಹತ್ತರ ಕೆಲಸ ಮಾಡುತ್ತಿದ್ದಾರೆಂದರು.

ಕಪ್ಪುಹಣ ವಾಪಸ್ಸು ಬಂದಿಲ್ಲ: ಹತ್ತು ವರ್ಷದ ಹಿಂದೆ ಮೋದಿ ಅಧಿಕಾರಕ್ಕೆ ಬರಲು ವರ್ಷಕ್ಕೆ ಎರಡು ಕೋಟಿ ಉದ್ಯೋಗ, 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ಸು ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಗಳನ್ನು ಹಾಕುವ ಭರವಸೆ ನೀಡಿದ್ದರು. ಯಾರೊಬ್ಬರ ಖಾತೆಗೂ 15 ಪೈಸೆ ಹಣ ಬರಲಿಲ್ಲ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿಲ್ಲ ಎಂದರು.

ರಕ್ಷಾ ರಾಮಯ್ಯರನ್ನು ಅಧಿಕ ಮತಗಳಿಂದ ಗೆಲ್ಲಿಸಿ:

ಶಿಕ್ಷಣ ಮತ್ತು ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಎಂ.ಎಸ್.ರಾಮಯ್ಯ ಕುಟುಂಬದ ಕುಡಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೆ ಮಾತ್ರ ಈ‌ ಬಾಗದ ಜನರಿಗೆ ಅದೊಂದು ಸೌಭಾಗ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹಾಗಾಗಿ ಎಲ್ಲ ಕಡೆಗೂ ರಕ್ಷಾ ಬರಲಿಕ್ಕಾಗಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಯೊಬ್ಬರು ನಾನೆ ರಕ್ಷಾ ರಾಮಯ್ಯ ಎಂದು ದುಡಿಯಬೇಕು ಅತಿ ಹೆಚ್ವು ಮತಗಳಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಈ ವೇಳೆ ವಿ.ಪ ಸದಸ್ಯ ಎಂ.ಆರ್.ಸೀತಾರಾಮ್, ನಾಗರಾಜ ಯಾದವ್,ಗಂಗರೇಕಾಲುವೆ ನಾರಾಯಣಸ್ವಾಮಿ,ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ, ಭರಣಿ ವೆಂಕಟೇಶ್, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಡಿವಿಆರ್ ರಾಜೇಶ್, ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಶ್ರೀಧರ್,ಅಡ್ಡಗಲ್ ಶ್ರೀಧರ್ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ, ಮುನೇಗೌಡ, ಕೆ‌.ಸಿ.ರಾಜಾಕಾಂತ್, ನಂದಿ ಎಂ.ಆಂಜಿನಪ್ಪ,ರಾಮರೆಡ್ಡಿ, ಶ್ರೀನಿವಾಸ್,ಕಿಸಾನ್ ಸೆಲ್ ಅಧ್ಯಕ್ಷ ರಾಮಕೃಷ್ಣಪ್ಪ, ನಾರಾಯಣಮ್ಮ,ಬಾಬಾಜಾನ್, ಜಾವೀದ್,ಬಿ.ಎಸ್.ರಫೀಉಲ್ಲಾ ಮತ್ತಿತರರು ಇದ್ದರು.