ಸಾರಾಂಶ
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರದ್ದಾಗಿದೆ. ಅವರ ಅವಧಿಯಲ್ಲಿ ಜಾರಿಗೆ ತಂದ ಹಲವಾರು ಯೋಜನೆಗಳು ಜನಕಲ್ಯಾಣವಾಗಿವೆ
ಮಂಡ್ಯ : ಹೋರಾಟದ ಮೂಲಕ ನಾಯಕತ್ವ ಗುಣಗಳನ್ನು ರೂಢಿಸಿಕೊಂಡು ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನ ಬಿಜೆಪಿಗೆ ಅಗತ್ಯವಾಗಿದೆ ಎಂದು ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಹೇಳಿದರು.
ನಗರದಲ್ಲಿರುವ ಸೇವಾಕಿರಣ ಸಭಾಂಗಣದಲ್ಲಿ ಜಿಲ್ಲಾ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘ ಮತ್ತು ಕ್ಯಾಪಿಟಲ್ ಸಿಟಿ ಚಲನಚಿತ್ರ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ೮೨ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ವಯೋವೃದ್ದರಿಗೆ ಉಚಿತ ಕಣ್ಣಿನ ಆರೋಗ್ಯ ತಪಾಸಣೆ, ಪೌಷ್ಟಿಕಾಹಾರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪನವರದ್ದಾಗಿದೆ. ಅವರ ಅವಧಿಯಲ್ಲಿ ಜಾರಿಗೆ ತಂದ ಹಲವಾರು ಯೋಜನೆಗಳು ಜನಕಲ್ಯಾಣವಾಗಿವೆ. ಇಂದಿಗೂ ಸಾಕಷ್ಟು ಯೋಜನೆಗಳು ಬಡವರ ಪಾಲಿಗೆ ಸಂಜೀವಿನಿಯಾಗಿ ನೆರವಾಗುತ್ತಿವೆ, ಇವರ ಮಾರ್ಗದರ್ಶದಲ್ಲಿ ಬಿಜೆಪಿ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದರು.
ವಯೋವೃದ್ದರೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಲು ಇಂತಹ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಎಂಟು ವರ್ಷಗಳಿಂದ ವಯೋವೃದ್ದರಿಗೆ ಬಿಜೆಪಿ ನಾಯಕ ಜನ್ಮದಿನ ಮತ್ತು ಶುಭಕಾರ್ಯಗಳಲ್ಲಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳಲ್ಲಿ ರಾಜ್ಯದ ಜನತೆ ಒದ್ದಾಡುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ದೊಡ್ಡಮಟ್ಟದ ಹೋರಾಟ ರೂಪಿಸಬೇಕಿದೆ. ಇದಕ್ಕೆಎಲ್ಲಾ ನಾಯಕರ ಸಹಕಾರ ಲಭ್ಯವಾಗಬೇಕಿದೆ ಎಂದು ಒತ್ತಾಯಿಸಿದರು.
ತಳಹಂತದಿಂದ ಬಿಜೆಪಿ ಕಟ್ಟಿದ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ನಾಯಕರಿಗೆ ಬೇಕಿದೆ. ವೈಮನಸ್ಸು ಬಿಟ್ಟು ಬಿಜೆಪಿಯನ್ನು ಮತ್ತಷ್ಟು ಗಟ್ಟಿಕೊಳಿಸಬೇಕಿದೆ, ಅಧಿಕಾರದತ್ತ ತರಲು ಶ್ರಮಿಸಬೇಕಿದೆ, ಜನರ ಬವಣೆಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನತೆ ಬಾರಿ ನೋವು ಅನುಭವಿಸುತ್ತಿದೆ, ಬೆಲೆ ಏರಿಕೆಯ ಬಿಸಿ ಸಹಿಸಿಕೊಳ್ಳಲಾಗುತ್ತಿಲ್ಲ, ೫ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಜನರು ತತ್ತರಿಸುತ್ತಿದ್ದಾರೆ, ವಿದ್ಯುತ್, ನೀರುದ ಏರಿಕೆ, ಸಮರ್ಪಕ ರಸ್ತೆ ಇಲ್ಲದೆ ಸಾಕಷ್ಟು ಅಪಘಾತಗಳು, ಸಾವು ನೋವು ಹೆಚ್ಚಾಗುತ್ತಿವೆ ಎಂದು ಎಚ್ಚರಿಸಿದರು.
ಕ್ಯಾಪಿಟಲ್ ಸಿಟಿ ಚಲನಚಿತ್ರ ನಾಯಕ ನಟ ರಾಜೀವ್‌ರೆಡ್ಡಿ, ಕನ್ನಡಿಗರು ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಪ್ರೋತ್ಸಾಹಿಸಿ, ಹೊಸ ಕಲಾವಿದರ ಬೆಳೆವಣಿಗೆಗೆ ಸಿನಿಪ್ರೇಕ್ಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವರ್ಧಮಾನ್ ನೇತ್ರಾಲಯದ ವೈದ್ಯರು ಮತ್ತು ತಂತ್ರಜ್ಞರು ವೃದ್ದರ ಕಣ್ಣು ತಪಾಸಣೆ ನಡೆಸಿದರು. ಆಶ್ರಮವಾಸಿಗಳಿಗೆ ಪೌಷ್ಟಿಕಾಹಾರ ವಿತರಣೆ ಮತ್ತು ಕೇಕ್ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಕೆ.ವಿವೇಕಾನಂದ, ಜಿಲ್ಲಾ ಡಾ.ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿತೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್‌ಮುಲ್ ನಿರ್ದೇಶಕ ಸ್ವಾಮಿ, ರೈತಮೋರ್ಚಾ ಅಧ್ಯಕ್ಷ ಅಶೋಕ್‌ಜಯರಾಂ, ಕಾರ್ಯದರ್ಶಿ ಆನಂದ್, ನಿತ್ಯಾನಂದ ಮತ್ತಿತರರಿದ್ದರು.