ಸಾರಾಂಶ
ಕಾಂಗ್ರೆಸ್ ಮುಖಂಡರಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ಸಮಾಧಾನಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಮಭಕ್ತರ ಬಂಧನ ಮಾಡಿಸುತ್ತಿದೆ. ಈ ಮೂಲಕ ಮುಖಂಡರಿಗೆ ಕಪ್ಪ ನೀಡಲು ಕಾಂಗ್ರೆಸ್‌ನವರು ಮುಂದಾಗಿದೆ ಎಂದು ಜಿಲ್ಲಾ ವಕ್ತಾರ ನಾಗರಾಜ ನಾಯಕ ಕಿಡಿಕಾರಿದರು.
ಕಾರವಾರ: ೩೧ ವರ್ಷದ ಹಳೆ ಪ್ರಕರಣವನ್ನು ಕೆದಕಿ ರಾಮಭಕ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಇಲ್ಲಿನ ಸುಭಾಸ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು.ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾದ ಶ್ರೀಕಾಂತ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ರಾಮಭಕ್ತರ ಮೇಲೆ ಪೊಲೀಸ್ ಇಲಾಖೆಯಿಂದ ಆಗುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಕ್ತಾರ ನಾಗರಾಜ ನಾಯಕ ಮಾತನಾಡಿ, ೧೯೯೨ರಲ್ಲಿ ಆದ ಪ್ರಕರಣಕ್ಕೆ ಈಗ ಏಕೆ ಬಂಧನ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಬೇಕು. ಕಾಂಗ್ರೆಸ್ ಮುಖಂಡರಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ಸಮಾಧಾನಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಮಭಕ್ತರ ಬಂಧನ ಮಾಡಿಸುತ್ತಿದೆ. ಈ ಮೂಲಕ ಮುಖಂಡರಿಗೆ ಕಪ್ಪ ನೀಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು, ಸಿದ್ದರಾಮಯ್ಯ ಹಿಂದೂ ಜಾತಿಗೆ ಕಳಂಕವಾಗಿದ್ದಾರೆ ಎಂದು ಕಿಡಿಕಾರಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ ಹೆಗಡೆ ನಗರಾಧ್ಯಕ್ಷ ನಾಗೇಶ ಕುರ್ಡೇಕರ, ಸಾಮಾಜಿಕ ಜಾಲತಾಣದ ಕಿಶನ್ ಕಾಂಬ್ಳೆ, ಕಾರ್ಯಕರ್ತರು ಇದ್ದರು.
ಪ್ರತಿಭಟನೆಗೆ ಸಂಸದ ಹೆಗಡೆ ಗೈರು: ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ದಿಶಾ ಸಭೆ ನಡೆಸಲು ಸಂಸದ ಅನಂತಕುಮಾರ ಹೆಗಡೆ ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದು, ಆದರೆ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಗೈರಾಗಿದ್ದರು. ಬೆಳಗ್ಗೆ ೧೦.೩೦ರ ವೇಳೆಗೆ ಸಂಸದರು ಆಗಮಿಸಿದ್ದು, ಅದೇ ವೇಳೆ ಬಿಜೆಪಿಯಿಂದ ಸುಭಾಸ್ ಸರ್ಕಲ್‌ನಲ್ಲಿ ಹಿಂದೂ ಕಾರ್ಯಕರ್ತರ ಬಂಧನದ ವಿರುದ್ಧ ಪ್ರತಿಭಟನೆಯಿತ್ತು. ಆದರೆ ಅಭಿಮಾನಿಗಳಿಂದ ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ಸಂಸದ ಅನಂತಕುಮಾರ ಹೆಗಡೆ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ದಿಶಾ ಸಭೆಗೆ ಆಗಮಿಸಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಳಿಕ ಸಭೆಗೆ ತೆರಳಿದರು.