ಸಾರಾಂಶ
ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯ "ರೋಹನ್ ಕಪ್' ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಜ.೫ರಿಂದ ಆರಂಭವಾಗಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ವೀರಯೋಧ ದಿ.ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಗೌರವಾರ್ಥ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್-2024 ಕ್ರಿಕೆಟ್ ಪಂದ್ಯಾವಳಿ ಜನವರಿ 5 ರಿಂದ 7ರ ವರೆಗೆ ಮಂಗಳೂರು ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯಲಿದೆ.ಬುಧವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಜ.5 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರಿಣಿ ಸಮಿತಿ ಸಭೆ ಮತ್ತು 11 ಗಂಟೆಗೆ ಕೆಯುಡಬ್ಲ್ಯುಜೆ 90 ನೇ ಸರ್ವ ಸದಸ್ಯರ ಮಹಾಸಭೆ ಸಹ್ಯಾದ್ರಿ ಕಾಲೇಜು ಆಡಿಟೋರಿಯಂನಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿರುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಪೆವಿಲಿಯನ್ ಉದ್ಘಾಟಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರದರ್ಶನ ಪಂದ್ಯ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬ್ರ್ಯಾಂಡ್ ಮಂಗಳೂರು ಫಲಕ ಅನಾವರಣಗೊಳಿಸುವರು. ಮಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೆರೋ ಟ್ರೋಫಿ ಅನಾವರಣಗೊಳಿಸುವರು. ಮಾಜಿ ಸಚಿವ ಅಭಯಚಂದ್ರ ಜೈನ್ ಮೆರವಣಿಗೆ ಉದ್ಘಾಟಿಸಲಿದ್ದು, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಟೂನ್ ಪ್ರದರ್ಶನವನ್ನು ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪಥ ಸಂಚಲನಕ್ಕೆ ಚಾಲನೆ ನೀಡಲಿದ್ದು, ಪುತ್ತೂರು ಶಾಸಕ ಅಶೋಕ್ ರೈ ಕ್ಯಾಪ್ ಹಸ್ತಾಂತರಿಸುವರು ಎಂದರು.ಉದ್ಘಾಟನೆಗೆ ಮುನ್ನ ಸಂಜೆ 4 ಗಂಟೆಗೆ ನಡೆಯುವ ಮೆರವಣಿಗೆಯಲ್ಲಿ ವಿವಿಧ ಜಿಲ್ಲಾ ತಂಡಗಳ ಆಟಗಾರರು ತಮ್ಮ ಜಿಲ್ಲೆಯ ಸಾಂಪ್ರದಾಯಿಕ ಉಡುಗೆ, ತೊಡುಗೆಗಳನ್ನು ಧರಿಸಿ ಹೆಜ್ಜೆ ಇರಿಸಲಿದ್ದಾರೆ. ಮೊದಲ ದಿನ ಮೀಡಿಯಾ ಇಲೆವೆನ್ ಹಾಗೂ ಜನಪ್ರತಿನಿಧಿಗಳ ಎರಡು ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಜ.6ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಎಲ್ಲ ತಂಡಗಳ ಕಪ್ತಾನರನ್ನು ಗೌರವಿಸಲಿದ್ದಾರೆ. 24 ತಂಡಗಳ ಸುಮಾರು 400 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಪತ್ರಕರ್ತರ ತಂಡವೂ ಸೇರಿದೆ. ಎರಡು ದಿನ ಲೀಗ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ನಿಖರ ಫಲಿತಾಂಶಕ್ಕಾಗಿ ಮೂರನೇ ಅಂಪೈರ್ ಕೂಡ ಇರಲಿದ್ದು, ಎಲ್‌ಇಡಿ ಮೂಲಕ ನೇರ ಪ್ರಸಾರ ಇರಲಿದೆ ಎಂದರು.7ರಂದು ಸಮಾರೋಪ:
ಜ.7ರಂದು ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕ್ರೀಡಾ ಸಚಿವ ನಾಗೇಂದ್ರ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಬಹುಮಾನ ವಿತರಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಅವರು ವೈಯಕ್ತಿಕ ಪ್ರಶಸ್ತಿ ವಿತರಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಇದ್ದರು.