ಸಾರಾಂಶ
ಶಿವಮೊಗ್ಗ: ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ವಿರೋಧಿಸಿ ಮಂಗಳವಾರ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ: ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ವಿರೋಧಿಸಿ ಮಂಗಳವಾರ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ವೇಳೆ ಶಿವಪ್ಪನಾಯಕ ವೃತ್ತದಲ್ಲಿ ಡಿ.ಕೆ.ಶಿವಕುಮಾರ್ ರವರ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಪ್ರತಿಕೃತಿ ಹಾಗೂ ಡಿ.ಕೆ.ಶಿವಕುಮಾರ್ ಭಾವಚಿತ್ರ ದಹಿಸಿ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆಗೆ ಹೋರಾಟ ಮಾಡಬೇಕು, ಎಸ್‌ಸಿ, ಎಸ್‌ಎಸ್ಟಿ ಅವರಿಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡಬೇಕು. ಕಾಂಗ್ರೆಸ್ ಆಡಳಿತದಲ್ಲಿ ಯಾವ ಹಣ ಎಲ್ಲಿಗೆ ಬೇಕಾದರೂ ಉಪಯೋಗವಾಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆಲ್ಲಾ ನ್ಯಾಯ ಸಿಗುತ್ತದೆ ಎಂದು ನಾವು ಆಧಿವೇಶನದಲ್ಲಿ ಹೋರಾಟ ಮಾಡಿದರೆ ಅಲ್ಲಿಯೂ ಸಹ ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆಗಳನ್ನು ತೋರುತ್ತಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಅಧಿಕಾರದ ಪಿತ್ತ ನೆತ್ತಿಗೇರಿಸಿಕೊಂಡು ಅಹಂಕಾರದ ಮಾತುಗಳನ್ನು ಆಡುತ್ತಿದೆ ಎಂದು ಕಿಡಿಕಾರಿದರು.ಮಾತೆತ್ತಿದರೆ ನಾವು 136 ಜನ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಾರೆ. ನೀವು 136 ಜನ ಗೆದ್ದಿದ್ದಕ್ಕೆ ಇಂದು ನಾಗರಿಕರು ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಗೆ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಇಂದು ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಬಳಿ ಅವರಿಗೆ ನೀಡಲು ಹಣವಿಲ್ಲ. ಇದೆಲ್ಲದರ ನಡುವೆ ಈಗ ಧರ್ಮಾಧಾರಿತ ಮೀಸಲಾತಿಯನ್ನು ನೀಡಲು ಹೊರಟಿದ್ದೀರಿ. ಯಾವ ಸಂವಿಧಾನದಲ್ಲೂ ಸಹ ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶವಿಲ್ಲ. ಆದರೂ ಸಹ ಸಂವಿಧಾನ ವಿರುದ್ಧವಾಗಿ ನೀವು ನಡೆದುಕೊಳ್ಳುತ್ತಿದ್ದೀರಾ. ಅಷ್ಟೇ ಅಲ್ಲದೆ ಡಿ.ಕೆ.ಶಿವಕುಮಾರ್ ರವರು ಮುಸ್ಲಿಮರಿಗೆ ಮೀಸಲಾತಿಯನ್ನು ನೀಡುವ ಸಲುವಾಗಿ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ನೀವು ಬಹುಮತದಿಂದ ಅಧಿಕಾರಕ್ಕೆ ಬಂದ ಮಾತ್ರಕ್ಕೆ ರಾಜ್ಯದಲ್ಲಿ ಏನು ಬೇಕೂ ಅದನ್ನು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್.ಕೆ.ಎನ್, ಪ್ರಮುಖರಾದ ದೀನದಯಾಳ್, ವೀರಭದ್ರಪ್ಪ ಪೂಜಾರಿ, ವೆಂಕಟೇಶ್ ರೆಡ್ಡಿ ಸೇರಿದಂತೆ ಹಲವರಿದ್ದರು.