ಸರ್ಕಾರ ರೈತರ ಹಿತ ಕಾಪಾಡುವ ಬದಲು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಸರ್ಕಾರದ ಖಜಾನೆಯಲ್ಲಿರುವ ಹಣವನ್ನು ರೈತರಿಗೆ ನೀಡಬೇಕು. ರೈತರನ್ನು ಕಾಪಾಡುವುದು ನಮ್ಮೆಲ್ಲರ ಧರ್ಮ. ಆದರೆ ಸರ್ಕಾರ ಗೋರಕ್ಷಣೆ ಮಾಡುತ್ತಿಲ್ಲ, ಭಕ್ಷಣೆ ಮಾಡುತ್ತಿದೆ ಎಂದು ಟೀಕಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ವತಿಯಿಂದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೈಯಲ್ಲಿ ಹಾಲಿನ ಕ್ಯಾನ್ ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಲಿನ ದರ ಏರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಕಾಂಗ್ರೆಸ್ನ ಬೆಲೆ ಏರಿಕೆ ನಿಲ್ಲಲಿ, ನಾಡಿನಿಂದ ಸರ್ಕಾರ ತೊಲಗಲಿ ಎಂಬ ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ , ಕಾಂಗ್ರೆಸ್ ಸರ್ಕಾರ ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಹಾಲಿನ ಜೊತೆಗೆ ಮೊಸರಿನ ದರವನ್ನೂ ಹೆಚ್ಚಿಸಲಾಗಿದೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಸರ್ಕಾರ ನೀಡಿದ ಕೊಡುಗೆ ಏನು? ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಹೆಚ್ಚಿಸಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ನೀರಿಗೆ ದುಡ್ಡು ಕೊಡುತ್ತೇವೆ, ಹಾಲಿಗೆ ದುಡ್ಡು ಕೊಡುವುದಿಲ್ಲವೇ ಎಂದು ಸಚಿವ ಕೃಷ್ಣ ಬೈರೇಗೌಡರು ಪ್ರಶ್ನಿಸಿದ್ದಾರೆ. ಹಾಗಾದರೆ ಯಾವುದರ ಬೆಲೆಯನ್ನು ಏರಿಸುವುದನ್ನು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸರ್ಕಾರ ರೈತರ ಹಿತ ಕಾಪಾಡುವ ಬದಲು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಸರ್ಕಾರದ ಖಜಾನೆಯಲ್ಲಿರುವ ಹಣವನ್ನು ರೈತರಿಗೆ ನೀಡಬೇಕು. ರೈತರನ್ನು ಕಾಪಾಡುವುದು ನಮ್ಮೆಲ್ಲರ ಧರ್ಮ. ಆದರೆ ಸರ್ಕಾರ ಗೋರಕ್ಷಣೆ ಮಾಡುತ್ತಿಲ್ಲ, ಭಕ್ಷಣೆ ಮಾಡುತ್ತಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ಬಸ್ಗಳ ದುರಸ್ಥಿಗೆ ಹಣವಿಲ್ಲ, ಡೀಸೆಲ್ ಖರೀದಿಗೂ ಹಣವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಬಿಯರ್ ಸೇರಿದಂತೆ ಮದ್ಯದ ದರಗಳನ್ನೂ ಹೆಚ್ಚಿಸಲಾಗಿದೆ. ಯಾವ ವಸ್ತುವಿನ ಬೆಲೆ ಏರಿಸುವುದನ್ನು ಸರ್ಕಾರ ಬಿಟ್ಟಿದೆ ಎಂಬುದನ್ನು ತಿಳಿಸಲಿ. ಯಾವ ಮೂಲದಿಂದ ಹಣ ಬರುತ್ತದೆ ಎಂಬುದರ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ₹5 ಕೋಟಿ ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಲೆಕ್ಕ ನೀಡಿಲ್ಲ ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಮುಳುಗಿಹೋಗುತ್ತಿದೆ ಎಂದು ಟೀಕಿಸಿದರು.ಬಿಜೆಪಿ ಕಾರ್ಯಕರ್ತರು ಸದ್ಯ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಾಲಿನ ದರ ಏರಿಕೆ ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಿ.ವಿ. ಶ್ರೀ ರಾಮಲಿಂಗಪ್ಪ, ಚಿಂತಾಮಣಿ ಮುಖಂಡ ವೇಣುಗೋಪಾಲ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಮುಖಂಡರಾದ ಲಕ್ಷ್ಮೀನಾರಾಯಣ ಗುಪ್ತ, ಸುರೇಂದ್ರ ಗೌಡ, ರಮೇಶ್ ರಾವ್ ಶಿಲ್ಪಿ, ಮಾರ್ಕೆಟ್ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಮುರಳೀಧರ್, ಮಧು ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಆರ್.ಎನ್. ಅಶೋಕ್, ಕಾರ್ಯಾಲಯ ಕಾರ್ಯದರ್ಶಿ ಎಚ್.ಕೆ. ಲಕ್ಷ್ಮಿಪತಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ ಗೌಡ, ತೇಜೇಂದ್ರ ಪಾಪು, ಗಂಗಾರೆಡ್ಡಿ, ಪ್ರತಾಪ್ ,ಕೋಡಿರ್ಲಪ್ಪ, ಗೋವಿಂದರಾಜು, ವೇಣು ಮಾಧವ್, ಮಾಧ್ಯಮ ಸಂಚಾಲಕ ವಿ ಮಧುಚಂದ್ರ, ಯುವ ಮುಖಂಡ ಮಹೇಶ್ ಬೈ , ಮಹಿಳಾ ಹಾಗೂ ಯುವ ಕಾರ್ಯಕರ್ತರು ಇದ್ದರು.