ಸಾರಾಂಶ
ಸಚಿವ ಕೃಷ್ಣ ಭೈರೇಗೌಡ ರಾಜ್ಯಪಾಲರನ್ನು ನಾಲಾಯಕ್ ಎಂದು ಕರೆದಿದ್ದಾರೆ.
ಹೊಸಪೇಟೆ: ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರಿಗೆ ಮಾಡಿದ ಅಪಮಾನ ಖಂಡಿಸಿ ಬಿಜೆಪಿಯಿಂದ ನಗರದ ತಹಸೀಲ್ದಾರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಮಾತನಾಡಿ, ಸಚಿವ ಕೃಷ್ಣ ಭೈರೇಗೌಡ ರಾಜ್ಯಪಾಲರನ್ನು ನಾಲಾಯಕ್ ಎಂದು ಕರೆದಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ರಾಜಭವನದಿಂದ ಬಾಂಗ್ಲಾದೇಶದ ಮಾದರಿಯಲ್ಲಿ ಓಡಿಸುವುದಾಗಿ ಎಂಎಲ್ಸಿ ಐವನ್ ಡಿಸೋಜಾ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಪ್ರಧಾನಮಂತ್ರಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಹಿಂಸೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇವರೆಲ್ಲರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಅವರ ಪ್ರತಿಕೃತಿಯನ್ನು ಸುಡುವಂತಹ ಹೀನಕೃತ್ಯಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ. ತಪ್ಪು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು, ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಆರೋಪ ಕೇಳಿ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆಗ ವಿರೋಧ ಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಸರಿಯಾಗಿದೆ ಎಂದಿದ್ದರು. ಈಗ ಅಂಥದ್ದೆ ಸಂದರ್ಭದಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಇದಕ್ಕೆ ಏನು ಹೇಳುತ್ತೀರಿ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದರು.ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಬಲ್ಲಾಹುಣಸಿ ರಾಮಣ್ಣ, ಅಶೋಕ್ ಜೀರೆ, ಕಿಚಡಿ ಕೊಟ್ರೇಶ್, ಓದೊ ಗಂಗಪ್ಪ, ರೇವಣಸಿದ್ದಪ್ಪ, ಶಂಕರ್ ಮೇಟಿ, ರಾಘವೇಂದ್ರ, ಕಾಸಟ್ಟಿ ಉಮಾಪತಿ, ಸಂಜೀವ್ ರೆಡ್ಡಿ ಇತರರಿದ್ದರು.