ಸಿ.ಟಿ. ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Dec 21 2024, 01:16 AM IST

ಸಿ.ಟಿ. ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿ.ಟಿ. ರವಿಗೆ ಕೊಲೆಗಡುಕ ಎನ್ನುವ ಲಕ್ಷ್ಮಿ ಹೆಬ್ಬಾಳ್ಕರ್, ಆವತ್ತು ಕೋವಿಡ್ ನಿರ್ಬಂಧ ಇರುವಾಗಲೇ ನಿಯಮ ಉಲ್ಲಂಘಿಸಿದ್ದರು. ಬೆಳಗಾವಿ ಜೈಲಿನ ಹೊರಗೆ ಕೊಲೆ ಆರೋಪಿ, ಕಾಂಗ್ರೆಸ್ ಶಾಸಕರಿಗೆ ಆರತಿ ಎತ್ತಿದಾಗ ಸತ್ತವರ ತಾಯಿಯ ಬಗ್ಗೆ ನೆನಪಾಗಲಿಲ್ಲವೇ?.

ಧಾರವಾಡ:

ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಹಾಗೂ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ಬಿಜೆಪಿ ಘಟಕದ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಿ.ಟಿ. ರವಿಗೆ ಕೊಲೆಗಡುಕ ಎನ್ನುವ ಲಕ್ಷ್ಮಿ ಹೆಬ್ಬಾಳ್ಕರ್, ಆವತ್ತು ಕೋವಿಡ್ ನಿರ್ಬಂಧ ಇರುವಾಗಲೇ ನಿಯಮ ಉಲ್ಲಂಘಿಸಿದ್ದರು. ಬೆಳಗಾವಿ ಜೈಲಿನ ಹೊರಗೆ ಕೊಲೆ ಆರೋಪಿ, ಕಾಂಗ್ರೆಸ್ ಶಾಸಕರಿಗೆ ಆರತಿ ಎತ್ತಿದಾಗ ಸತ್ತವರ ತಾಯಿಯ ಬಗ್ಗೆ ನೆನಪಾಗಲಿಲ್ಲವೇ? ಎಂದು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಪ್ರಶ್ನಿಸಿದರು.

ಆರ್ಟಿಕಲ್ 194(2) ಸಂವಿಧಾನದ ಅಡಿಯಲ್ಲಿ ಶಾಸಕರನ್ನು ಬಂಧಿಸುವ ಮುಂಚೆ ಕೆಲವು ನಿಯಮಗಳಿವೆ. ಅವುಗಳನ್ನು ಗಾಳಿಗೆ ತೂರಿ ಏಕಾಏಕಿ ಬಂಧಿಸಿದ್ದು ತಪ್ಪು. ತಮ್ಮ ಶಾಸಕರಿಂದ ಮಹಿಳಾ ದೌರ್ಜನ್ಯವಾದ ಸಂದರ್ಭದಲ್ಲಿ ಬಂಧಿಸದ ಸರ್ಕಾರ ಇಂದು ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ? ಅತ್ಯಾಚಾರ ಎಂಬ ಗಂಭೀರ ಆರೋಪ ಬಂದಾಗ ಮೊದಲು ಪೊಲೀಸರು ಕಾಂಗ್ರೆಸ್‌ ಶಾಸಕರನ್ನು ಬಂಧಿಸಬೇಕಿತ್ತು ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಹಾಗೂ ಪೊಲೀಸರ ಮಧ್ಯೆ ಜಟಾಪಟಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭಾವಚಿತ್ರ ದಹಿಸಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದಾಗ, ಪೊಲೀಸರು ತಡೆದರು. ಆಗ ಟೈಯರ್‌ಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಲಾಯಿತು. ಟೈಯರ್‌ ಬೆಂಕಿಗೆ ಮುಖ್ಯಮಂತ್ರಿ ಹಾಗೂ ಹೆಬ್ಬಾಳ್ಕರ್‌ ಭಾವಚಿತ್ರ ಹಾಕಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಲಿಂಗರಾಜ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಸುನೀಲ ಮೋರೆ, ಮೋಹನ ರಾಮದುರ್ಗ, ಸುರೇಶ ಬೇದರೆ, ವಿಷ್ಣು ಕೋರಳ್ಳಿ, ಶಂಕರ ಶೇಳಕೆ, ಸಿದ್ದು ಕಲ್ಯಾಣಶಟ್ಟಿ, ಶಕ್ತಿ ಹಿರೇಮಠ, ಬಸವರಾಜ ಚಳಗೇರಿ ಮತ್ತಿತರರು ಇದ್ದರು.