ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

| Published : Jan 04 2024, 01:45 AM IST

ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಜನ್ಮ ಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿಸಿರುವ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಿಡುಗಡೆಗೆ ಒತ್ತಾಯ.

ಕನ್ನಡಪ್ರಭ ವಾರ್ತೆ ಹಾವೇರಿ

ರಾಮಜನ್ಮ ಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿಸಿರುವ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಿಡುಗಡೆಗೆ ಒತ್ತಾಯಿಸಿ ಹಾಗೂ ರಾಜ್ಯಾದ್ಯಂತ ರಾಮಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಪೂಜಾರಿ ಬಂಧನ, ರಾಮಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಘೋಷಣೆ ಕೂಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಬಾಬರಿ ಮಸೀದಿ ಕಟ್ಟಡ ದ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕಾಗಿ ಸುಮಾರು ೩೨ ವರ್ಷಗಳ ಹಿಂದಿನ ಪ್ರಕರಣವನ್ನು ಕೆದಿಕಿ ಹಿಂದೂ ಕಾರ್ಯಕರ್ತನೊಬ್ಬನನ್ನ ಬಂಧಿಸಿ ಹಿಂದುಗಳೇ ಕರ್ನಾಟಕದಲ್ಲಿ ನಿಮಗೆ ಧ್ವನಿ ಎತ್ತುವ ಹಕ್ಕಿಲ್ಲ ಎಂಬ ಸಂದೇಶವನ್ನು ರವಾನಿಸಲು ಕಾಂಗ್ರೆಸ್ ಸರ್ಕಾರ ಹೊಂಚು ಹಾಕಿ ಕುಳಿತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ಖಂಡನೀಯ. ಸಿದ್ದರಾಮಯ್ಯನಂತಹ ನೂರಾರು ಕಾಂಗ್ರೆಸ್ಸಿನ ನಾಯಕರ ಪ್ರಯತ್ನದ ಫಲವಾಗಿಯೂ ಹಿಂದೂ ಕಾರ್ಯಕರ್ತರನ್ನು ಮತ್ತು ರಾಮಮಂದಿರ ನಿರ್ಮಾಣವನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಸಣ್ಣಸಣ್ಣ ಹಿಂದೂ ಕಾರ್ಯಕರ್ತರನ್ನ ಗುರಿಯಾಗಿಸಿ ಹಿಂದೂ ಸಮಾಜವನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಿಂದು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಮನೆಯಲ್ಲಿ ಕೂರಿಸುವ ಕೆಲಸ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜೈ ಶ್ರೀರಾಮ್ ಎಂದು ಕೂಗುವ ಹಿಂದೂ ಕಾರ್ಯಕರ್ತರ ಧ್ವನಿಯನ್ನ ಕುಗ್ಗಿಸುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಒಬ್ಬ ಶ್ರೀಕಾಂತ್ ಪೂಜಾರಿಯನ್ನ ಬಂಧಿಸಿದರೆ ರಾಜ್ಯಾದ್ಯಂತ ಮನೆಗೊಬ್ಬರಂತೆ ಶ್ರೀಕಾಂತ್ ಪೂಜಾರಿ ಬರುತ್ತಾರೆ. ಕರ್ನಾಟಕದಲ್ಲಿರುವ ಶಾಂತಿ, ಸೌಹಾರ್ದತೆಗೆ ಸರ್ಕಾರದ ಕುಮ್ಮಕ್ಕಿನಿಂದಲೇ ಮತ್ತು ತುಷ್ಟೀಕರಣ ನೀತಿಯಿಂದಲೇ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಿದರು.

ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕೊಟ್ಟ ಮಾತು ನೆರವೇರಿಸಲು ಸಾಧ್ಯವಾಗದೇ ಇರುವುದನ್ನ ಮುಚ್ಚಿ ಹಾಕಲು, ಜನರ ದೃಷ್ಟಿಯನ್ನು ಬೇರೆಡೆಗೆ ಸೆಳೆಯಲು ಈ ರೀತಿ ಒಂದಲ್ಲ ಒಂದು ಕುತಂತ್ರಗಳನ್ನ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ. ಈ ಕೂಡಲೇ ಇಂತಹ ಧರ್ಮವಿರೋಧಿ ಚಟುವಟಿಕೆಗಳನ್ನ ಮಾಡುವುದನ್ನು ಬಿಟ್ಟು ರಾಜ್ಯದ ಜನತೆಗೆ ಉತ್ತಮ ಆಡಳಿತವನ್ನು ಮತ್ತು ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಭೋಜರಾಜ್ ಕರೂದಿ, ಪಾಲಾಕ್ಷಗೌಡ ಪಾಟೀಲ, ಕೆ. ಶಿವಲಿಂಗಪ್ಪ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ಕೃಷ್ಣ ಈಳಗೇರ, ರುದ್ರೇಶ ಚಿನ್ನಣ್ಣನವರ ಹಾಗೂ ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಇದ್ದರು.