ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನಕ್ಕೆ ಆಕ್ರೋಶ

| Published : Jan 04 2024, 01:45 AM IST

ಸಾರಾಂಶ

1992ರಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ 31 ವರ್ಷ ಹಳೆ ಕೇಸ್‌ ಆಧರಿಸಿ ಹಿಂದೂಕಾರ್ಯಕರ್ತ ಶ್ರೀಕಾಂತ್‌ ಪೂಜಾರಿ ಬಂಧನವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ: ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನಕ್ಕೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬುಧವಾರ ಒನಕ್ಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಧಿಕ್ಕಾರ ಕೂಗಿದರು.

ಈ ವೇಳೆ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ 31 ವರ್ಷದ ಹಿಂದಿನ ಕೇಸನ್ನು ಕೆದಕಿ ಶ್ರೀಕಾಂತ್ ಪೂಜಾರಿ ಹಾಗೂ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮುಸ್ಲಿಂರನ್ನು ಓಲೈಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಅನುಸರಿಸುತ್ತಿದೆ. ಅಯೋಧ್ಯೆಯಲ್ಲಿ ನಡೆದ ಕರ ಸೇವೆಯಲ್ಲಿ ಜಿಲ್ಲೆಯಿಂದ ಐದುನೂರು ಕಾರ್ಯಕರ್ತರು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಅವರೆಲ್ಲರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

1980 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಾಗಿ ದೇಶದ ಜನತೆಗೆ ವಚನ ನೀಡಿತ್ತು. ಅದರಂತೆ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ನೇತೃತ್ವದಲ್ಲಿ ರಥಯಾತ್ರೆ ಕೂಡ ದೇಶದೆಲ್ಲೆಡೆ ಸಂಚರಿಸಿದ್ದನ್ನು ಜನ ಮರೆತಿಲ್ಲ. ನಮ್ಮ ಪಕ್ಷ ಕೊಟ್ಟ ಮಾತಿನಂತೆ ರಾಮ ಮಂದಿರ ಕಟ್ಟುತ್ತಿದೆ. ಇಡಿ ಜಗತ್ತು ರಾಮಮಂದಿರದ ಕಡೆ ನೋಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಅಗತ್ಯವಾದರೂ ಕಾಂಗ್ರೆಸ್ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿದರು?

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಾಮರಸ್ಯ ಹಾಳು ಮಾಡುವ ಕೆಲಸಕ್ಕೆ ಕೈಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಶ್ರೀಕಾಂತ ಪೂಜಾರಿಯನ್ನು ಕೂಡಲೆ ಬಿಡುಗಡೆಗೊಳಿಸಿ ಅವರ ಮೇಲೆ ದಾಖಲಿಸಿರುವ ಕೇಸನ್ನು ವಜಾ ಮಾಡದಿದ್ದರೆ ಪ್ರತಿ ತಾಲೂಕು ಹಾಗೂ ಮಂಡಲ, ಶಕ್ತಿ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದೆಂದು ಎ.ಮುರಳಿ ಎಚ್ಚರಿಸಿದರು.

ರಾಮ ಮಂದಿರ ನಿರ್ಮಾಣದ ಹಿಂದೆ ಲಕ್ಷಾಂತರ ಕಾರ್ಯಕರ್ತರ ಬಲಿದಾನವಿದೆ. ರಾಮನ ಶಾಪ ನಿಮಗೆ ತಟ್ಟುತ್ತದೆ. ಇದೇ ರೀತಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುತ್ತಾರೆಂದು ಕಿಡಿಕಾರಿದರು.

ಬಿಜೆಪಿ ಯುವ ಮುಖಂಡ ಡಾ.ಸಿದ್ದಾರ್ಥ ಮಾತನಾಡಿ 31 ವರ್ಷದ ಹಳೆಯ ಕೇಸನ್ನು ಕೆದಕಿ ರಾಜ್ಯ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಕರೆ ಸೇವಕರಿಗೆ ವಿನಾ ಕಾರಣ ತೊಂದರೆ ಕೊಡುತ್ತಿದೆ. ಅದಕ್ಕಾಗಿ ಜನತೆಯಲ್ಲಿ ಕಾಂಗ್ರೆಸ್ ವಿರುದ್ದ ಜಾಗೃತಿ ಮೂಡಿಸಿ ರಾಮ ಮಂದಿರ ಮಂತ್ರಾಕ್ಷತೆಯ ಜೊತೆಗೆ ಪ್ರತಿಭಟನೆಯನ್ನು ಪ್ರತಿ ಮನೆ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಜಿ ನರೇಂದ್ರನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್‍ಯಾದವ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಹಿರಿಯೂರು ಮಂಡಲ ಅಧ್ಯಕ್ಷ ವಿಶ್ವನಾಥ್, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಹೊಸದುರ್ಗ ಮಂಡಲ ಅಧ್ಯಕ್ಷ ಜಗದೀಶ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ರಾಮರೆಡ್ಡಿ, ಮಲ್ಲಿಕಾರ್ಜುನ್, ಸಂಪತ್‍ಕುಮಾರ್, ನಂದಿ ನಾಗರಾಜ್, ಶಿವಣ್ಣಾಚಾರ್, ವಕ್ತಾರ ನಾಗರಾಜ್‍ಬೇದ್ರೆ, ಕಾರ್ಯದರ್ಶಿಗಳಾದ ಸಿಂಧು, ಸರಸ್ವತಿ, ರಜಿನಿ, ಕವನ, ಕಾಂಚನ, ವೀಣ, ಶ್ಯಾಮಲ ಶಿವಪ್ರಕಾಶ್, ಬಸಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.