ಒಂದು ವಾರದೊಳಗೆ ಭೂಮಿ ಮಟ್ಟದಲ್ಲಿರುವ ವಿದ್ಯುತ್ ದೀಪಗಳ ಅಳವಡಿಕೆ ಸಮಸ್ಯೆ ಬಗೆಹರಿಸದಿದ್ದರೆ ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್ ಅವರ ಅಮಾನತ್ತಿಗೆ ಆಗ್ರಹಿಸಿ ರಸ್ತೆ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಸ್ಥಳದಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ಪಟ್ಟಣ ವ್ಯಾಪ್ತಿಯಲ್ಲಿ ಇಲಾಖೆಯಿಂದ ನಿರ್ವಹಿಸಿರುವ ಬಹುತೇಕ ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟವಿಲ್ಲ. ಜೊತೆಗೆ ಪಟ್ಟಣದ ಐದು ದೀಪ ವೃತ್ತದಿಂದ ಹಾರೋಹಳ್ಳಿ ಕೆಎಚ್ಬಿ ಕಾಲೋನಿವರೆಗೆ ಅಳವಡಿಸಿರುವ ವಿದ್ಯುತ್ ದೀಪಗಳ ಕಾಮಗಾರಿಯು ಕೂಡ ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಳವಡಿಸಲಾಗಿರುವ ಕೇಬಲ್ ಭೂಮಿ ಮಟ್ಟದಲ್ಲಿದ್ದು, ಅಗತ್ಯಕ್ಕೆ ತಕ್ಕಂತೆ ಗುಂಡಿ ತೆಗೆದು ಕೇಬಲ್ ಅಳವಡಿಸಿಲ್ಲ. ಇದರಿಂದ ವಿದ್ಯುತ್ ಅವಗಡಗಳು ಸಂಭವಿಸುವ ಅಪಾಯವಿದೆ. ಈ ಕಳಪೆ ವಿದ್ಯುತ್ ಕೇಬಲ್ ಅಳವಡಿಕೆಯಿಂದ ಅವಘಡ ಸಂಭವಿಸಿದರೆ ಸರ್ಕಾರ ಹೊಣೆ ಹೊರಬೇಕಾಗುತ್ತದೆ. ಕಾಮಗಾರಿ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಂಪೂರ್ಣ ನಿರ್ಲ್ಯಕ್ಷತೆ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.

ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಲು ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕೆಲವು ವಿಚಾರಗಳ ಬಗ್ಗೆ ಸಮರ್ಪಕ ಉತ್ತರ ನೀಡದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಒಬ್ಬರಿಗೊಬ್ಬರೂ ಅಸಮರ್ಪಕ ಉತ್ತರ ನೀಡುತ್ತಾರೆ ಎಂದು ದೂರಿದರು.

ಒಂದು ವಾರದೊಳಗೆ ಭೂಮಿ ಮಟ್ಟದಲ್ಲಿರುವ ವಿದ್ಯುತ್ ದೀಪಗಳ ಅಳವಡಿಕೆ ಸಮಸ್ಯೆ ಬಗೆಹರಿಸದಿದ್ದರೆ ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್ ಅವರ ಅಮಾನತ್ತಿಗೆ ಆಗ್ರಹಿಸಿ ರಸ್ತೆ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತ್ಯಾಗರಾಜ ಕಾಲೋನಿ ಸೀತಾರಾಂ, ಬಿಜೆಪಿ ಮುಖಂಡರಾದ ಎಚ್.ಕೆ.ದೊರೆಸ್ವಾಮಿ, ಆರ್.ಚನ್ನಕೇಶವ, ಹಿರೇಮರಳಿ ಶೀನಪ್ಪ, ಎನ್.ಭಾಸ್ಕರ್, ಟಿ.ಎಸ್.ಛತ್ರ ಮಹೇಶ್, ಮಧು ಸೇರಿದಂತೆ ಇತರರಿದ್ದರು.