ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ಕೆಐಎಡಿಬಿ, ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಅವ್ಯವಹಾರ ತನಿಖೆ ಮತ್ತು ಸಚಿವ ಎಂ.ಬಿ.ಪಾಟೀಲ ರಾಜೀನಾಮೆಗೆ ಆಗ್ರಹಿಸಿ ಬಬಲೇಶ್ವರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜುಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.ಶನಿವಾರ ಬಬಲೇಶ್ವರದಲ್ಲಿ ಕೆಐಎಡಿಬಿ ಹಗರಣದ ತನಿಖೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜುಗೌಡ ಪಾಟೀಲ ಅವರು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕೇಳಿ ಬಂದಿರುವ ಕೆಐಎಡಿಬಿ ಹಗರಣದ ತನಿಖೆಗೆ ಬಬಲೇಶ್ವರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದರು.
ಯಾವ ಯಾವ ದೇಶದಲ್ಲಿ ಏನೇನು ಇಟ್ಟಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಅವರು, ರೈತರಿಗೆ ನೀರು ಬೇಕು, ನೀರಾವರಿ ಮಾಡಿದ್ದಾರೆ, ನೀರು ಕೊಟ್ಟಿದ್ದಾರೆ ಎಂದೆಲ್ಲ ನೀವು ಅವರನ್ನು ಆಯ್ಕೆ ಮಾಡಿಕೊಂಡು ಬರುತ್ತಿದ್ದೀರಿ. ಸತತವಾಗಿ ನಾಲ್ಕು ಬಾರಿ ಸೋತರೂ ನಾನು ಸುಮ್ಮನಿದ್ದೆ. ಆದರೆ ನೀರಾವರಿ ಮಾಡಿದ್ದರಿಂದ ಯಾರ ಮನೆಗಳು ಅಭಿವೃದ್ಧಿ ಆಗಿವೆ ಎಂಬುದನ್ನು ಕ್ಷೇತ್ರದ ಜನರು ಅರಿಯಬೇಕು ಎಂದು ಹೇಳಿದರು.ತಮ್ಮ ವಿರುದ್ಧ ದೂರು ಪಡೆದಿರುವ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರು, ತಮ್ಮ ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕೆ ದಲಿತ ನಾಯಕರಾಗಿರುವ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಹಗುರ ಪದ ಬಳಸಿ ನಿಂದಿಸಲಾಗುತ್ತಿದೆ ಎಂದು ದೂರಿದ ಅವರು, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಏನೇನು ಮಾತನಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಆಸ್ತಿ, ಅಂತಸ್ತು, ಅಧಿಕಾರ ಇದೇ ಎಂಬ ಕಾರಣಕ್ಕೆ ಅಧಿಕಾರದ ಮದದಲ್ಲಿ ಏನೇನೋ ಮಾತನಾಡಿದರೆ ಸರಿಯಲ್ಲ. ಕಾಲಚಕ್ರ ತಿರುಗುತ್ತಿರುತ್ತದೆ ಎಂದರು.
ಬಬಲೇಶ್ವರ ಕ್ಷೇತ್ರದಲ್ಲೂ ಸತ್ತವರ ಹೆಸರಿನಲ್ಲಿ ಆಸ್ತಿ ಕಬಳಿಸಲಾಗಿದ್ದು, ಇದೀಗ ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಭೂ ಹಗರಣದ ಸುಮಾರು 35 ಪ್ರಕರಣಗಳು ದಾಖಲಾಗಿವೆ. ಭೂಮಿ, ಹಣ ಕಳೆದುಕೊಂಡವರು ತೀವ್ರ ನೊಂದಿದ್ದಾರೆ ಎಂದ ಅವರು, ಇನ್ನೂ ಬಹಳ ಹಗರಣಗಳಿವೆ. ಒಂದೊಂದೇ ಹಗರಣ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.ಬಬಲೇಶ್ವರದಲ್ಲಿ ಈಗ ನಡೆಯುತ್ತಿರುವ ಹೋರಾಟಕ್ಕೆ ವಾಹನ ವ್ಯವಸ್ಥೆ ಮಾಡಿದ್ದರೂ ವಾಹನಗಳ ಮಾಲೀಕರಿಗೆ ಫೋನ್ ಮಾಡಿ ವಾಹನ ಬಿಡದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ ಅವರು, ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ತಾವೇನು ಎಂಬುದನ್ನು ಅರಿಯಬೇಕು. ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಸೇರಿದಂತೆ ಮುಂತಾದವರು ಇದ್ದರು.