ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

| Published : May 17 2024, 12:39 AM IST

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಹತ್ಯೆ ನಡೆದಿದೆ. ಕೂಡಲೇ ಆರೋಪಿ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಜನರೇ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರವೇ ಸರಿಯಾದ ಕಾನೂನು ಕ್ರಮ ಜರುಗಿಸಬೇಕು.

ಹುಬ್ಬಳ್ಳಿ:

ರಾಜ್ಯ ಸರ್ಕಾರದ ವೈಫಲ್ಯದಿಂದಲೇ ಅಂಜಲಿ ಅಂಬಿಗೇರ ಹತ್ಯೆಯಾಗಿದೆ ಎಂದು ಆರೋಪಿಸಿ ನಗರದಲ್ಲಿ ಗುರುವಾರ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿತು. ಈ ವೇಳೆ ಠಾಣೆಗೆ ನುಗ್ಗಲು ಯತ್ನಿಸಿದ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಆರೋಪಿ ಬಂಧಿಸಲು ಆಗದ ಪೊಲೀಸರು, ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು.

ಪ್ರೀತಿಗೆ ನಿರಾಕರಿಸಿದ್ದಕ್ಕಾಗಿ ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿಯನ್ನು ವಿಶ್ವನಾಥ ಅಲಿಯಾಸ್‌ ಗಿರೀಶ ಸಾವಂತ ಮನೆಗೇ ನುಗ್ಗಿ ಬುಧವಾರ ಬೆಳಗಿನ ಜಾವ ಹತ್ಯೆ ಮಾಡಿದ್ದ. ಈ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ನಗರದ ವೀರಾಪುರ ಓಣಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಹರ ಪೊಲೀಸ್‌ ಠಾಣೆ ತಲುಪಿತು. ಠಾಣೆ ಎದುರಿಗೆ ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಹತ್ಯೆ ನಡೆದಿದೆ. ಕೂಡಲೇ ಆರೋಪಿ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಜನರೇ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರವೇ ಸರಿಯಾದ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಧನ ಬಿಡುಗಡೆ:

ಒಂದು ಗಂಟೆಗೂ ಹೆಚ್ಚುಕಾಲ ಶಹರ ಪೊಲೀಸ್‌ ಠಾಣೆ ಎದುರಿನ ರಸ್ತೆಯ ಮೇಲೆ ಕುಳಿತು ಧರಣಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಠಾಣೆಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರ ನಡುವೆ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಪೊಲೀಸರು ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದುಕೊಂಡು ಹೋದರು.

ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ರಂಗಾ ಬದ್ದಿ, ಬಸವರಾಜ ಅಮ್ಮಿನಬಾವಿ, ಪ್ರತಿಭಾ ಪವಾರ್, ಜಗದೀಶ್ ಬುಳ್ಳಾನವರ, ರಾಜು ಜರತಾರಘರ್, ಶಶಿಕಾಂತ ಬಿಜವಾಡ್, ಪದ್ಮಾವತಿ ಚಿಗಳಂಪಲ್ಲಿ, ನಾಗರತ್ನ ಬಳ್ಳಾರಿ, ಸುವರ್ಣ ಜಂಗಮಗೌಡ್ರ, ಶಿವಾನಂದ ಅಂಬಿಗೇರ, ಅನೂಪ ಬಿಜವಾಡ, ಹರೀಶ್ ಹಳ್ಳಿಕೇರಿ, ನಾಗರಾಜ ಅಂಬಿಗೇರ, ಸವಿತಾ ಚವ್ಹಾಣ, ಲಕ್ಷ್ಮೀಕಾಂತ ಘೋಡಕೆ ಮತ್ತಿತರರು ಇದ್ದರು. ನಮ್ಮ ಮಕ್ಕಳ ಜೀವಕ್ಕೆ ಗ್ಯಾರಂಟಿ ಕೊಡಿ

ಪ್ರತಿಭಟನಾ ನಿರತ ಬಿಜೆಪಿ ಮಹಿಳಾ ಕಾರ್ಯಕರ್ತೆಯರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಗ್ಯಾರಂಟಿ ಯೋಜನೆ ನೀಡಿರುವುದಾಗಿ ಜಂಬಕೊಚ್ಚಿಕೊಳ್ಳುತ್ತಿದೆ. ನಮಗೆ ನಿಮ್ಮ ಈ ಗ್ಯಾರಂಟಿಗಳೆಲ್ಲ ಬೇಕಿಲ್ಲ, ನಮ್ಮ ಮಕ್ಕಳ ಜೀವನದ ಗ್ಯಾರಂಟಿ ಕೊಡಿ. ನಿರ್ಲಕ್ಷ್ಯ ವಹಿಸಿದ ಸ್ಥಳೀಯ ಪೊಲೀಸರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.