ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ರಾಜ್ಯದ ಹಲವೆಡೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಹೊಸಪೇಟೆ, ಮಂಗಳೂರು, ತುಮಕೂರು, ಗದಗ, ಮೈಸೂರು, ಶಿವಮೊಗ್ಗ ಮತ್ತಿತರ ಕಡೆ ಬಿಜೆಯಿಂದ ಪ್ರತಿಭಟನೆ ನಡೆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು.
ಪೊಲೀಸರು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ಮೇಲೆ ತರಾತುರಿಯಿಂದ ಪ್ರಕರಣ ದಾಖಲಿಸುತ್ತಾರೆ. ಕಂಕನಾಡಿ ನಮಾಜ್ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಹಾಕುತ್ತಾರೆ. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಹೆಸರಿದ್ದರೂ ಎಫ್‌ಐಆರ್ ದಾಖಲಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಂಡ ಸರ್ಕಾರ. ಬಹುಕೋಟಿ ರುಪಾಯಿ ಲೂಟಿ ನಡೆದಿದ್ದರೂ ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ. ಈ ಕುರಿತು ಸಿಬಿಐನಿಂದ ತನಿಖೆ ನಡೆಯಬೇಕು. ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರೀ ಲೂಟಿ, ಹಗರಣದಲ್ಲಿ ಮುಳುತ್ತದೆ. ಬಡವರ ಬಗ್ಗೆ ಈ ಪಕ್ಷಕ್ಕೆ ಕಾಳಜಿಯೇ ಇಲ್ಲ. ಚುನಾವಣೆಗೋಸ್ಕರ ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಲಾಗಿದೆ. ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣ ಲೂಟಿ ನಿಜಕ್ಕೂ ಖಂಡನೀಯ ಎಂದು ಪ್ರತಿಭಟನಾಕಾರರು ಕಿಡಿಕಾಡಿದರು.ನಾಗೇಂದ್ರ ಪರ ಕೈನಿಂದ ಬೃಹತ್ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಬಳ್ಳಾರಿವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬಾರದು ಎಂದು ಆಗ್ರಹಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಅಭಿಮಾನಿಗಳು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿದರು.ಪಾದಯಾತ್ರೆ ನೇತೃತ್ವ ವಹಿಸಿದ್ದ ನಗರ ಶಾಸಕ ನಾ.ರಾ. ಭರತ್ ರೆಡ್ಡಿ ಮಾತನಾಡಿ, ಹಣ ಅಕ್ರಮ ಹಾಗೂ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಆದರೆ ಬಿಜೆಪಿಯವರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮರೆಮಾಚಲು ಸಚಿವ ನಾಗೇಂದ್ರ ರಾಜೀನಾಮೆ ಕೇಳುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಶುರುಗೊಂಡ ಪಾದಯಾತ್ರೆ ಡಬಲ್ ರಸ್ತೆ, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಪಕ್ಷದ ಮುಖಂಡರು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಪಾದಯಾತ್ರೆ ಶುರುವಿಗೆ ಮುನ್ನ ಶ್ರೀಕನಕ ದುರ್ಗಮ್ಮದೇವಿಗೆ ಪೂಜೆ ಸಲ್ಲಿಸಿದ ಪಕ್ಷದ ಕಾರ್ಯಕರ್ತರು 101 ತೆಂಗಿನಕಾಯಿ ಸಮರ್ಪಿಸಿದರು.