ಸಾರಾಂಶ
ಬಳ್ಳಾರಿ: ನಗರದ ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ಮುಖಂಡ ಗಣಪಾಲ್ ಐನಾಥ ರೆಡ್ಡಿ ಅವರ ಪದಗ್ರಹಣ ಸಮಾರಂಭ ಸೋಮವಾರ ಜರುಗಿತು.
ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಐನಾಥ ರೆಡ್ಡಿ ಅವರು ಪಕ್ಷದ ರೈತ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡರು.ಇದೇ ವೇಳೆ ಮಾತನಾಡಿದ ಐನಾಥ ರೆಡ್ಡಿ, ಜಿಲ್ಲೆಯಲ್ಲಿ ಪಕ್ಷ ಅತ್ಯಂತ ಬಲಿಷ್ಠವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಇದ್ದಾರೆ. ರೈತ ಸಮೂಹದ ನಡುವೆ ಪಕ್ಷದ ಸಿದ್ಧಾಂತ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಅನೇಕ ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಸಂಘಟನೆಯನ್ನು ಮತ್ತಷ್ಟೂ ಗಟ್ಟಿಗೊಳಿಸಬೇಕಾದ ಅಗತ್ಯವಿದ್ದು, ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ರೈತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ಶೀಘ್ರದಲ್ಲಿಯೇ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿರುವುದರಿಂದ ಪಕ್ಷವನ್ನು ಮತ್ತಷ್ಟೂ ಗಟ್ಟಿಗೊಳಿಸಬೇಕಾದ ಅಗತ್ಯವಿದೆ. ಕೇಂದ್ರ ಸರ್ಕಾರ ರೈತ ಸಮುದಾಯದ ಹಿತ ಕಾಯಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಎಲ್ಲ ಯೋಜನೆಗಳ ಕುರಿತು ರೈತರಿಗೆ ತಿಳಿಸಿಕೊಡಬೇಕು ಎಂದರು.ಪಕ್ಷದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಮಶೇಖರಗೌಡ, ಸಹ ಪ್ರಭಾರಿ ಸುಮಾರೆಡ್ಡಿ, ವಿ.ಎಸ್. ಶಂಕರ್, ಶರಣಗೌಡ ಸೇರಿದಂತೆ ಮೋರ್ಚಾದ ಪದಾಧಿಕಾರಿಗಳು ಹಾಗೂ ಪಕ್ಷದ ವಿವಿಧ ಮೋರ್ಚಾಗಳ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.