ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ಜಾರಿ..!

| Published : Mar 05 2024, 01:31 AM IST

ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ಜಾರಿ..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರ ಎಂದು ಘೋಷಣೆ ಮಾಡಿದೆ. ಆದ್ದರಿಂದ ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ರೈತರಿಗಾಗಲಿ ಅಥವಾ ಶೈಕ್ಷಣಿಕ ಸಾಲ ಪಡೆದಿರುವ ವಿದ್ಯಾರ್ಥಿಗಳಿಗಾಗಲಿ ಸಾಲ ಮರುಪಾವತಿಗಾಗಿ 2025ರ ಮೇ ವರೆಗೆ ಯಾವುದೇ ನೋಟಿಸ್ ಅಥವಾ ಒತ್ತಡ ಹಾಕುವುದಾಗಲಿ ಮಾಡಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಾಲ ಮರು ಪಾವತಿಗಾಗಿ ನೋಟಿಸ್ ನೀಡಿರುವುದನ್ನು ರೈತರು, ವಿವಿಧ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ತಗ್ಗಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಮ್ಯಾನೇಜರ್ ಅವರನ್ನು ತರಾಟೆ ತೆಗೆದುಕೊಂಡ ರೈತರು ಹಾಗೂ ಮುಖಂಡರು, ನಾಲೆಗಳಲ್ಲಿ ನೀರಿಲ್ಲದೇ ಬೆಳೆ ಬೆಳೆಯಲು ಆಗದೇ ಸಂಕಷ್ಟದಲ್ಲಿರುವ ರೈತರಿಗೆ ನೋಟಿಸ್ ನೀಡಿ ಬೆದರಿಕೆ ತಂತ್ರ ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಮಳೆ ಕಡಿಮೆಯಾಗಿ, ನಾಲೆಗಳಲ್ಲೂ ನೀರು ಬಿಡದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದ ಜೀವನ ನಿರ್ವಹಣೆ ಮಾಡುವುದಕ್ಕೂ ಆಗದೇ ತೊಂದರೆಯಲಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ತೀರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪೋಷಕರುಗಳು ಕಟ್ಟಬೇಕಾದ ಬ್ಯಾಂಕಿನ ಸಾಲಕ್ಕೆ 15 ವರ್ಷದ ಹೆಣ್ಣು ಮಗುವಿಗೂ ಸಹ ಬ್ಯಾಂಕಿನ ನೋಟಿಸ್ ನೀಡಿರುವುದು ಖಂಡನೀಯ. ಈ ರೀತಿ ನೋಟಿಸ್ ನೀಡಿ ಬೆದರಿಸಿದರೆ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮಂಡ್ಯ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರ ಎಂದು ಘೋಷಣೆ ಮಾಡಿದೆ. ಆದ್ದರಿಂದ ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ರೈತರಿಗಾಗಲಿ ಅಥವಾ ಶೈಕ್ಷಣಿಕ ಸಾಲ ಪಡೆದಿರುವ ವಿದ್ಯಾರ್ಥಿಗಳಿಗಾಗಲಿ ಸಾಲ ಮರುಪಾವತಿಗಾಗಿ 2025ರ ಮೇ ವರೆಗೆ ಯಾವುದೇ ನೋಟಿಸ್ ಅಥವಾ ಒತ್ತಡ ಹಾಕುವುದಾಗಲಿ ಮಾಡಬಾರದು ಎಂದು ಆಗ್ರಹಿಸಿದರು.

ಸರ್ಕಾರದ ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಬರುತ್ತಿರುವ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ವಜಾ ಮಾಡುವುದು ಸರಿಯಲ್ಲ. ಕೂಡಲೇ ಫಲಾವುಭವಿಗಳಿಗೆ ಹಣ ನೀಡಬೇಕು. ಮತ್ತೆ ಇಂತಹ ಘಟನೆಗಳು ಜರುಗದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಬ್ಯಾಂಕ್‌ನ ಎದುರು ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ರೈತರು, ಮುಖಂಡರ ಮನವಿ ಆಲಿಸಿದ ಬ್ಯಾಂಕ್ ಮ್ಯಾನೇಜರ್ ನೀವು ಕೇಳಿರುವ ಕಾಲಾವಕಾಶದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ನೀಡುತ್ತೇನೆ. ಅವರ ಸೂಚನೆಯಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸರ್ವೋದಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ತಗ್ಗಹಳ್ಳಿ ಪ್ರಸನ್ನ, ರಾಜ್ಯ ರೈತ ಸಂಘದ ಖಜಾಂಚಿ ಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕಿ ಮಾಜಿ ನಿರ್ದೇಶಕ ಟಿ.ಎಂ.ವೆಂಕಟೇಶ್, ರೈತ ಮುಖಂಡರಾದ ಯರಹಳ್ಳಿ ಬೊಮ್ಮೇಗೌಡ, ಪಾಂಡು, ಎಂ.ಬಿ.ಲೋಕೇಶ್ , ಹಳುವಾಡಿ ನಾಗೇಂದ್ರ, ಯೋಗಾನಂದ, ಮಂಚೇಗೌಡ, ದೇವರಾಜು, ಚಿಕ್ಕಲಿಂಗೇಗೌಡ, ಎಂ.ಪಿ.ವಿನೋದ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.