ಕೊಳೆಗೇರಿ ಜನರು ಕಸ, ಹುಣ್ಣಾಗಲೀ ಅಲ್ಲ: ನಂದಿನಿ

| Published : Mar 05 2024, 01:31 AM IST

ಸಾರಾಂಶ

ಅಮೆರಿಕಾವನ್ನೂ ಮೀರಿಸುವ ದೇಶ ಭಾರತವಾಗುತ್ತದೆಂದು ಹೇಳುವ ಹಿಂದೆ ಬಡವರ ಪರಿಶ್ರಮ ದೊಡ್ಡದಿದೆ. ಆದರೆ, ಅದನ್ನು ಎಲ್ಲಿಯೂ ಗುರುತಿಸಲ್ಲ. ಕೊಳೆಗೇರಿ ಜನರು ಒಂದು ರೀತಿ ಲೆಕ್ಕಕ್ಕಿಲ್ಲದಂತೆ ಬಾಳುವಂತಾಗಿದೆ. ನಗರ ಕಟ್ಟುವ ಜನರನ್ನು ಕಣ್ಣಿನಲ್ಲಿ ಆಗುವ ಹುಣ್ಣಿನಂತೆ ನೋಡುವ ಸರ್ಕಾರಗಳಿವೆ. ಕಣ್ಣಿನಲ್ಲಾದ ಹುಣ್ಣು ತೆಗೆದು ಹಾಕುವ ರೀತಿ ನಗರದಲ್ಲಿ ಸ್ಲಂ ಜನರಿದ್ದರೆ ದೂರ ಕಳಿಸುವ ಹುನ್ನಾರ ನಡೆಸುತ್ತಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಳುವ ಸರ್ಕಾರಗಳು ಹೇಳುವ ಅಭಿವೃದ್ಧಿ, ಆರ್ಥಿಕ ಬೆಳವಣಿಗೆಯಲ್ಲಿ ಬೆವರು ಸುರಿಸಿ ದುಡಿಯುವ ಕೊಳೆಗೇರಿ ಜನರ ಕೊಡುಗೆ ದೊಡ್ಡದಿದ್ದು, ಕೊಳೆಗೇರಿ ಜನರು ನಗರದ ಕಸ ಅಥ‍ವಾ ಹುಣ್ಣಾಗಲೀ ಅಲ್ಲ ಎಂಬುದು ಆಳುವವರು ಅರಿಯಲಿ ಎಂದು ಏಕ್ಷನ್ ಏಡ್‌ ಅಸೋಸಿಯೇಷನ್ ಇಂಡಿಯಾ ಸಂಘಟನೆಯ ನಂದಿನಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಸ್ಲಂ ಜನರ ಸಂಘಟನೆ ಕರ್ನಾಟಕ, ಏಕ್ಷನ್ ಏಡ್ ಅಸೋಸಿಯೇಷನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸ್ಲಂ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಅಮೆರಿಕಾವನ್ನೂ ಮೀರಿಸುವ ದೇಶ ಭಾರತವಾಗುತ್ತದೆಂದು ಹೇಳುವ ಹಿಂದೆ ಬಡವರ ಪರಿಶ್ರಮ ದೊಡ್ಡದಿದೆ. ಆದರೆ, ಅದನ್ನು ಎಲ್ಲಿಯೂ ಗುರುತಿಸಲ್ಲ. ಕೊಳೆಗೇರಿ ಜನರು ಒಂದು ರೀತಿ ಲೆಕ್ಕಕ್ಕಿಲ್ಲದಂತೆ ಬಾಳುವಂತಾಗಿದೆ. ನಗರ ಕಟ್ಟುವ ಜನರನ್ನು ಕಣ್ಣಿನಲ್ಲಿ ಆಗುವ ಹುಣ್ಣಿನಂತೆ ನೋಡುವ ಸರ್ಕಾರಗಳಿವೆ. ಕಣ್ಣಿನಲ್ಲಾದ ಹುಣ್ಣು ತೆಗೆದು ಹಾಕುವ ರೀತಿ ನಗರದಲ್ಲಿ ಸ್ಲಂ ಜನರಿದ್ದರೆ ದೂರ ಕಳಿಸುವ ಹುನ್ನಾರ ನಡೆಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಸ್ಲಂ ಜನರ ಸಂಘಟನೆ- ರಾಜ್ಯ ಮುಖಂಡ ಐಸಾಕ್ ಅಮೃತ ರಾಜ್ ಮಾತನಾಡಿ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಕಾಯ್ದೆ 2023ರ ಕರಡಿನ ಪ್ರಕಾರ ಯಾವುದೇ ಕೊಳೆಗೇರಿಯ ಜನರ ಒಕ್ಕಲೆಬ್ಬಿಸದೇ ಮೂಲಭೂತ ಸೌಲಭ್ಯ, ಸೌಕರ್ಯ, ಉದ್ಯೋಗ, ಜೀವನ ನಿರ್ವಹಣೆ ದೃಷ್ಟಿಯಿಂದ ತಲುಪಲು ಸುಲಭ ಸಾಧ್ಯವಿರುವ ವಸತಿ ವ್ಯವಸ್ಥೆ ಸಲ್ಲಿಸಬೇಕು. ರಾಜ್ಯದ ಎಲ್ಲಾ ನಗರ, ಗ್ರಾಮೀಣ ಕೊಳಚೆ ಪ್ರದೇಶಗಳನ್ನು ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಯಂ ಪ್ರೇರಣೆಯಿಂದ ಅಥವಾ ನಿವಾಸಿಗಳ ಅರ್ಜಿ ಅನುಸಾರ ಅಥವಾ ಯಾವುದೇ ಸಂಘ-ಸಂಸ್ಥೆಯ ಅರ್ಜಿಯನುಸಾರ ಗುರುತಿಸಲಿ. ಆಯಾ ಜಿಲ್ಲಾಧಿಕಾರಿಗಳು ಸ್ಲಂ ಘೋಷಿಸಲಿ. 3 ತಿಂಗಳಲ್ಲಿ ಸ್ಲಂಗಳ ಪ್ರಾಥಮಿಕ ಪಟ್ಟಿ ಪ್ರಕಟಿಸಬೇಕು. 6 ತಿಂಗಳಲ್ಲಿ ಪಟ್ಟಿಯಲ್ಲಿನ ಪ್ರದೇಶವನ್ನು ಸ್ಲಂ ಘೋಷಿಸದಿದ್ದರೂ ಅದು ಕೊಳಚೆ ಪ್ರದೇಶವೆಂದು ಘೋಷಿತವಾದಂತೆ ಆಗಬೇಕು ಎಂದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್, ಅರುಣಕುಮಾರ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು, ರೈತ ಮುಖಂಡ ಬುಳ್ಳಾಪುರ ಹನುಮಂತಪ್ಪ, ಡಿಎಸ್ಸೆಸ್ ನ ಎಲ್‌.ಆರ್.ಚಂದ್ರಣ್ಣ, ರೇಷ್ಮಾ ಬಾನು, ಫರೀದಾ ಬಾನು, ಎಂ.ಕರಿಬಸಪ್ಪ ಇತರರಿದ್ದರು.

.........

ಸರ್ಕಾರಕ್ಕೆ ಜಾಗ ಇಲ್ಲದಿದ್ರೂ ಖಾಸಗಿ ಬಡಾವಣೆ ಉದ್ಭವ: ಎಲ್.ಎಚ್.ಅರುಣಕುಮಾರ

ಕೊಳೆಗೇರಿಗಳಿಗೆ, ವಸತಿ ಹೀನರಿಗೆ ಸೂರು ಕಲ್ಪಿಸಲು ಸರ್ಕಾರದ ಬಳಿ ಜಮೀನು, ಜಾಗ ಇರುವುದಿಲ್ಲ. ಆದರೆ, ದಿನಕ್ಕೊಂದರಂತೆ ಖಾಸಗಿ ಬಡಾವಣೆಗಳು ಉದ್ಭವವಾಗುತ್ತಿವೆ ಎಂದು ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್‌.ಅರುಣಕುಮಾರ ಮಾರ್ಮಿಕವಾಗಿ ಹೇಳಿದರು.

ಆಳುವ ಸರ್ಕಾರಕ್ಕೆ ಸಿಗದ ಭೂಮಿಯು ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಹೇಗೆ ಸಿಗುತ್ತದೆನ್ನುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಒಂದರ್ಥದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ದೇಶದೆಲ್ಲೆಡೆ ವ್ಯಾಪಿಸಿದ್ದು, ರಾಜ್ಯ ಸರ್ಕಾರಗಳ ಹಿಂಬಾಗಿಲಿನ ಮೂಲಕ ಆಳುತ್ತಿವೆ, ಆಡಿಸುತ್ತಿವೆಯೆಂದರೂ ಅತಿಶಯೋಕ್ತಿಯಲ್ಲ ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಬೇರೂರಿರುವ ಜಾತಿ ತಾರತಮ್ಯ ಕಡಿಮೆ ಮಾಡಲು ಅಂಬೇಡ್ಕರರು ನಗರೀಕರಣಕ್ಕೆ ಆದ್ಯತೆ ನೀಡಿದ್ದರು. ಅದರೆ ನಗರ ಪ್ರದೇಶಗಳಲ್ಲೂ ಈ ಜಾತಿ ತಾರತಮ್ಯ ಕಾಣುತ್ತಿದ್ದೇವೆ. ಅದರಲ್ಲೂ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಉತ್ತಮ ಬಡಾವಣೆಯಾಗಲೀ, ಸುಧಾರಣೆಗಳಾಗಲೀ ಆಗಿಲ್ಲ. ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ. ಕೇವಲ ಹಕ್ಕುಪತ್ರಕ್ಕಾಗಿಯೇ ದಶಕಗಳಗಟ್ಟಲೇ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

.............

ಪ್ರತಿ ಕೊಳಚೆ ಪ್ರದೇಶದಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡಬೇಕು. ಕೊಳಚೆ ಪ್ರದೇಶ ಗುರುತಿಸಿದ ಮೇಲೆ, ಮಂಡಳಿ ಪ್ರತಿ ಸ್ಲಂನಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿ, ಅಲ್ಲಿ ವಾಸಿಸುವ ಕುಟುಂಬಗಳ ವಿವರವಾದ ಪಟ್ಟಿ ಸಿದ್ಧಪಡಿಸಲಿ. ಅಲ್ಲದೇ ಘನತೆಯ ವಸತಿಯನ್ನು ಖಾತ್ರಿಪಡಿಸಲು ಎಲ್ಲರಿಗೂ ವಸತಿಗಳ ದುರಸ್ತಿ, ಸುಧಾರಣೆ, ನವೀಕರಣದ ಸೌಲಭ್ಯವನ್ನು ಕೊಳಚೆ ಅಭಿವೃದ್ಧಿ ಮಂಡಳಿಯು ಒದಗಿಸಬೇಕು.

ಐಸಾಕ್ ಅಮೃತ ರಾಜ್

ಸ್ಲಂ ಜನರ ಸಂಘಟನೆ, ಕರ್ನಾಟಕ