ಸಾರಾಂಶ
ಜಿಲ್ಲಾಡಳಿತ ಭವನದ ಎದುರು ಜಾನವಾರುಗಳೊಂದಿಗೆ ಹೋರಾಟ । ಸರ್ಕಾರದ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳಪೆಟ್ರೋಲ್, ಡಿಸೇಲ್ ಸೇರಿ ಹಾಲಿನ ದರ ಏರಿಕೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಾನುವಾರಗಳೊಂದಿಗೆ ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯ ಸರ್ಕಾರವು ಏಕಾಏಕಿ ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಮಾಡಿದೆ. ತೈಲ ಬೆಲೆಗಳ ಏರಿಕೆಯಿಂದ ಇತರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುವಂತಾಗಿದೆ. ಕಾಂಗ್ರೆಸ್ ಸರ್ಕಾರವು ಬಡವರ ಪರ ಇರುತ್ತೇವೆ ಎಂದು ಗ್ಯಾರಂಟಿಗಳನ್ನು ಜಾರಿಮಾಡಿ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಈಗ ತೈಲ ಬೆಲೆ ಏರಿಕೆಯಿಂದ ಜನರ ಪರಿಸ್ಥಿತಿ ನಿಜಕ್ಕೂ ಸಂಕಷ್ಟಕ್ಕೆ ದೂಡುವಂತೆ ಆಗಿದೆ. ಇನ್ನು ಕಳೆದ ಬಾರಿ ಹಾಲಿನ ಪ್ರೋತ್ಸಾಹಕ್ಕೆ ಮೀಸಲಿಟ್ಟ ಹಣವನ್ನು ಪಶುಪಾಲನಾ ಇಲಾಖೆಯು ತನ್ನ ಖರ್ಚು ವೆಚ್ಚಕ್ಕೆ ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೂಡಲೇ ಈ ಬಗ್ಗೆ ಸರ್ಕಾರವು ಗಮನ ಹರಿಸಬೇಕು. ಬಾಕಿ ಉಳಿದಿರುವ ಎಂಟು ತಿಂಗಳ ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಸರ್ಕಾರ ಕೊಡಮಾಡುವ ಹಾಲಿನ ಪ್ರೋತ್ಸಾಹ ಧನವೂ ಇಲ್ಲ, ಬರ ಪರಿಹಾರವೂ ಇಲ್ಲ, ಇತ್ತ ಬಿತ್ತನೆ ಬೀಜದ ದರವೂ ಏರಿಕೆಯಾಗಿದೆ. ಇದರಿಂದ ಕೃಷಿಕನು ಜೀವನ ನಡೆಸುವುದು ದುಸ್ತರವಾಗಿದೆ. ಭೂ ಸಿರಿ ಯೋಜನೆಯನ್ನು ರಾಜ್ಯ ಸರ್ಕಾರವು ನಿಲ್ಲಿಸಿದೆ. ವಿದ್ಯಾ ನಿಧಿ ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಇನ್ನು ರೈತರು ತಮ್ಮ ಪಂಪ್‌ಸೆಟ್‌ಗೆ ಟ್ರಾನ್ಸಫಾರ್ಮರ್ ಪಡೆಯಬೇಕೆಂದರೆ ಲಕ್ಷಾಂತರ ರೂ. ವೆಚ್ಚ ಮಾಡುವಂತ ಪರಿಸ್ಥಿತಿ ಎದುರಾಗಿದೆ. ಆಸ್ತಿ ನೊಂದಣಿ ದರ ಹೆಚ್ಚಳ ಮಾಡಲಾಗಿದೆ. ಈ ವರೆಗೂ ಕ್ಷೀರ ಸಮೃದ್ಧಿ ಬ್ಯಾಂಕ್ ಆರಂಭಿಸಿಲ್ಲ. ೮೨೪ ರೈತರ ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನು ಸರ್ಕಾರವು ತಿಳಿದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಬಿಜೆಪಿ ಆಡಳಿತದಲ್ಲಿ ೪೦ ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಸರ್ಕಾರವು ಈಗ ಅದೇ ಆರೋಪ ಎದುರಿಸುತ್ತಿದೆ. ನ್ಯಾ. ನಾಗಮೋಹನ ದಾಸ್ ಆಯೋಗವು ಕಳೆದೊಂದು ವರ್ಷದಿಂದ ತನಿಖೆ ಸಮರ್ಪಕವಾಗಿ ನಡೆಸುತ್ತಿಲ್ಲ. ತೈಲ ಬೆಲೆಗಳನ್ನು ಹೆಚ್ಚಿಸಿ ಜನರಿಗೆ ಮತ್ತೆ ಹೊರೆ ಮಾಡಲಾಗಿದೆ ಎಂದು ಆರೋಪಿಸಿ ನಗರದ ಡಿಸಿ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾ ಮುಖಂಡರು ಜಾನುವಾರು ತಂದು ಅವುಗಳೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ, ಸುನೀಲ್ ಹೆಸರೂರು ಇತರರಿದ್ದರು.