ಬಿಜೆಪಿಯಿಂದ ಮತದಾನ ವ್ಯವಸ್ಥೆಯನ್ನು ಕೊಲೆಗೈಯುವ ಸಂಚು: ಶ್ವೇತಾ ಬಂಡಿ

| Published : Oct 17 2025, 01:01 AM IST

ಬಿಜೆಪಿಯಿಂದ ಮತದಾನ ವ್ಯವಸ್ಥೆಯನ್ನು ಕೊಲೆಗೈಯುವ ಸಂಚು: ಶ್ವೇತಾ ಬಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಭುತ್ವವನ್ನು ಗಟ್ಟಿಗೊಳಿಸಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ನೀಡಲಾದ ಮತದಾನ ವ್ಯವಸ್ಥೆಯನ್ನು ಬಿಜೆಪಿ ಚುನಾವಣಾ ಆಯೋಗದ ಜತೆ ಸೇರಿ ಕೊಲೆಗೈಯುವ ಸಂಚು ರೂಪಿಸಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರಜಾಭುತ್ವವನ್ನು ಗಟ್ಟಿಗೊಳಿಸಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ನೀಡಲಾದ ಮತದಾನ ವ್ಯವಸ್ಥೆಯನ್ನು ಬಿಜೆಪಿ ಚುನಾವಣಾ ಆಯೋಗದ ಜತೆ ಸೇರಿ ಕೊಲೆಗೈಯುವ ಸಂಚು ರೂಪಿಸಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಆರೋಪಿಸಿದರು.

ಬುಧವಾರ ಪಟ್ಟಣದ ಕನಕ ಉದ್ಯಾನವನ ಮುಂಭಾಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ವೋಟ್ ಚೋರ್ ಗದ್ಧಿ ಚೋಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಗ್ರಂಥವಾಗಿದ್ದು, ಎಲ್ಲ ಜಾತಿ ಧರ್ಮದ ಜನತೆಯನ್ನು ಒಗ್ಗೂಡಿಸಿ ಕರೆದೊಯ್ಯುವ ಜತೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದೆ ಎಂದ ಅವರು, ಸಂವಿಧಾನದ ಮೂಲಕ ರಾಷ್ಟ್ರಪತಿ, ಪ್ರಧಾನಿ ಸಹಿತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚುನಾವಣೆಯಲ್ಲಿ ಒಂದು ಮತ ನೀಡುವ ಹಕ್ಕು ನೀಡಲಾಗಿದ್ದು, ಆ ಮೂಲಕ ಬಹುಜನರ ಅಪೇಕ್ಷೆಯ ವ್ಯಕ್ತಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಮೂಲಕ ಮತದಾರರು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಬಿಜೆಪಿ ಕಸಿದುಕೊಳ್ಳುವ ಸಂಚು ರೂಪಿಸಿದ್ದು, ಈ ದಿಸೆಯಲ್ಲಿ ಮಹದೇವಪುರದಲ್ಲಿ ಲಕ್ಷಕ್ಕೂ ಅಧಿಕ ನಕಲಿ ಮತದಾರರ ಗುರುತಿನ ಪತ್ರದ ಮೂಲಕ ನಾಗರೀಕರ ಹಕ್ಕನ್ನು ಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, 40 ಸಾವಿರ ಅಧಿಕ ಸುಳ್ಳು ವಿಳಾಸ ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಬೇಜವಾಬ್ದಾರಿತನದ ಉತ್ತರ ನೀಡುತ್ತಿದೆ ಎಂದು ದೂರಿದರು.

ಚುನಾವಣಾ ಅಕ್ರಮದ ಮೂಲಕ ಅಧಿಕಾರ ಪಡೆದಿರುವ ಕೇಂದ್ರ ಸರ್ಕಾರ ನಮ್ಮ ಆರೋಪವನ್ನು ಸುಳ್ಳು ಎಂದು ಸಾಬೀತುಪಡಿಸಲಿ. ತಪ್ಪಿದಲ್ಲಿ ಅಧಿಕಾರ ಕೈಬಿಟ್ಟು ಕೆಳಗಿಳಿಯುವಂತೆ ಸವಾಲು ಹಾಕಿದರು. ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ, ಜನಸಾಮಾನ್ಯರ ಜತೆ ಅತ್ಯಂತ ಸಂಯಮದಿಂದ ಕುಳಿತು ಸಂವಹನ ನಡೆಸುವ ರಾಹುಲ್ ಭವಿಷ್ಯದ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಹೊರತು ಮೋದಿ ರೀತಿ ಮನ್ ಕಿ ಭಾತ್, ಬೇಟಿ ಪಡಾವೋ ಬಚಾವೋ ಎಂದು ಬಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಮಾತ್ರ ಸಂವಿಧಾನದ ಆಶಯ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದು, ಜನಸಾಮಾನ್ಯರು ಘನತೆ ಗೌರವದಿಂದ ಬದುಕಲು ತಳವರ್ಗದ ಜನತೆ ಐಎಎಸ್, ಕೆಎಎಸ್, ವೈದ್ಯಕೀಯ ಶಿಕ್ಷಣ ಪಡೆಯಲು ಸಾದ್ಯ ಎಂದರು.

ಶಿಕಾರಿಪುರ ಶಿವಶರಣರ ನಾಡು ವೈಚಾರಿಕವಾಗಿ ಜಾಗೃತ ಪ್ರಜ್ಞೆ ಹೊಂದಿರುವ ಹೆಗ್ಗಳಿಕೆ ಹೊಂದಿದೆ, ಮತಗಳ್ಳತನದ ಹಗರಣದ ಬಗ್ಗೆ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಜಾಗೃತರಾಗಿರಬೇಕು ತಪ್ಪಿದಲ್ಲಿ ಊಹೆಗೂ ನಿಲುಕದ ದೃಷ್ಕೃತ್ಯ ನಡೆಯಲಿದೆ ಸಹಿ ಸಂಗ್ರಹದ ಮೂಲಕ ಹಗರಣ ಬಯಲಿಗೆಳೆಯಲು ಸರ್ಕಾರ,ಉಚ್ಚ ನ್ಯಾಯಾಲಯಕ್ಕೆ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರರು ಸಹಕರಿಸುವಂತೆ ಮನವಿ ಮಾಡಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಎನ್.ಅರುಣ್ ಮಾತನಾಡಿ, 1983ರಲ್ಲಿ ಮತದಾನಕ್ಕೆ ತೆರಳಿದಾಗ ಮತ ಚಲಾವಣೆಯಾಗಿ ವಾಪಾಸ್ ಬಂದಿದ್ದು, ಇದೀಗ ಮತಗಳ್ಳತನದ ಅನುಮಾನ ದಟ್ಟವಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳದ ಮಾತನಾಡಿ, ಬಲಿಷ್ಠ ಸಂವಿಧಾನದಿಂದಾಗಿ ಮಹಿಳೆಯರು ರಾತ್ರಿ ನಿರ್ಭಯವಾಗಿ ಒಡಾಡುತ್ತಿದ್ದು, ಜಗತ್ತಿನಲ್ಲಿ ಭಾರತದ ಸಂವಿಧಾನಕ್ಕೆ ವಿಶೇಷ ಗೌರವವಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯ ರವಿಕಿರಣ್, ಶ್ರೀಧರ ಕರ್ಕಿ, ಸುರೇಶ್ ಧಾರವಾಡ, ವಿಜಯಕುಮಾರ್, ರೇಣುಕಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್, ನಿರ್ದೇಶಕ ಕಾಂತೇಶ್, ಸುವರ್ಣಮ್ಮ, ಚೈತ್ರ, ಕೃಷ್ಣೋಜಿರಾವ್, ವಾಸುದೇವಾಚಾರ್, ಈಶಣ್ಣ ಕಲವತ್ತಿ, ಮಂಜು ಮತ್ತಿತರರು ಹಾಜರಿದ್ದರು.