ಬೆಳಗಾವಿ ಮೇಲೆ ಬಿಜೆಪಿಯ ಮತ್ತಷ್ಟು ಬಿಗಿ ಹಿಡಿತ

| Published : Jun 05 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ. ಈ ಮೂಲಕ ಬೆಳಗಾವಿ ಕ್ಷೇತ್ರದ ಮೇಲೆ ಬಿಜೆಪಿ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದೆ. ಕಾಂಗ್ರೆಸ್‌ನ ಹುರಿಯಾಳು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಅವರಿಗೆ ಸೋಲುಂಟಾಗಿದೆ. ಬಿಜೆಪಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ. ಈ ಮೂಲಕ ಬೆಳಗಾವಿ ಕ್ಷೇತ್ರದ ಮೇಲೆ ಬಿಜೆಪಿ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದೆ. ಕಾಂಗ್ರೆಸ್‌ನ ಹುರಿಯಾಳು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಅವರಿಗೆ ಸೋಲುಂಟಾಗಿದೆ. ಬಿಜೆಪಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೇ 7 ರಂದು ಮತದಾನ ನಡೆದಿತ್ತು. ಶೇ.71.38 ರಷ್ಟು ಮತದಾನ ಆಗಿತ್ತು. ಬಿಜೆಪಿ ಹಾಲಿ ಸಂಸದೆ ಮಂಗಲ ಸುರೇಶ ಅಂಗಡಿ ಅವರು ಈ ಬಾರಿ ಸ್ಪರ್ಧೆ ಮಾಡಿರಲಿಲ್ಲ. ಅವರ ಬದಲಾಗಿ ಅವರ ಬೀಗರಾದ ಪಕ್ಕದ ಹುಬ್ಬಳ್ಳಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಟಿಕೆಟ್‌ ಘೋಷಣೆ ಮಾಡುತ್ತಿದ್ದಂತೆಯೇ ಸ್ಥಳೀಯ ಕೆಲ ಬಿಜೆಪಿ ನಾಯಕರು ಶೆಟ್ಟರ್‌ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಗೋ ಬ್ಯಾಕ್‌ ಶೆಟ್ಟರ್‌ ಅಭಿಯಾನವೂ ನಡೆದಿತ್ತು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿ, ಬಿಜೆಪಿಯಲ್ಲಿನ ಭಿನ್ನಮತ ಶಮನಗೊಳಿಸುವಲ್ಲಿ ಯಶಸ್ವಿಯಾದರು. ಬಳಿಕ ವಿರೋಧ ವ್ಯಕ್ತಪಡಿಸಿದ ನಾಯಕರೆಲ್ಲರೂ ಜಗದೀಶ ಶೆಟ್ಟರ್‌ ಜೊತೆಗೆ ನಿಂತು ಸಂಘಟಿತರಾಗಿ ಚುನಾವಣಾ ಪ್ರಚಾರ ಮಾಡಿದರು. ಇದರ ಜೊತೆಗೆ ಮೋದಿ ಹವಾ ಜಗದೀಶ ಶೆಟ್ಟರ್‌ ಅವರನ್ನು ಗೆಲುವಿನ ದಡಕ್ಕೆ ಕರೆದೊಯ್ದಿದೆ. ಈ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಭದ್ರಕೋಟೆ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.

ಪ್ರತಿಪಕ್ಷದ ನಾಯಕರು ತಮ್ಮ ವಿರುದ್ಧ ವೈಯಕ್ತಿಕವಾಗಿ ಎಷ್ಟೇ ಟೀಕೆ ಟಿಪ್ಪಣೆ ಮಾಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಮೌನವಾಗಿಯೇ ಉತ್ತರ ನೀಡಿದ್ದರು. ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವರಾಗಿ 2 ಬಾರಿ ಸೇವೆ ಮಾಡಿರುವುದು, ಬೆಳಗಾವಿ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿರುವುದು, ಅದನ್ನು ಲೋಕಾರ್ಪಣೆಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿರುವುದು ಹೀಗೆ ತಾವು ಮಾಡಿದ ಅಭಿವೃದ್ಧಿ ಕಾರ್ಯಮತ್ತು ಕೇಂದ್ರಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಯಾಚನೆ ಮಾಡಿದ್ದರು. ಪ್ರಮುಖವಾಗಿ ಮರಾಠ ಮತಗಳನ್ನು ಪಡೆಯುವಲ್ಲಿಯೂ ಶೆಟ್ಟರ್‌ ಯಶಸ್ವಿಯಾಗಿದ್ದಾರೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿರುವುದು ಕೂಡ ಬಿಜೆಪಿ ಗೆಲುವಿಗೆ ಪ್ಲಸ್‌ ಪಾಯಿಂಟ್‌ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಮುಖಭಂಗ:

ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಜಗದೀಶ ಶೆಟ್ಟರ್‌ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿದರು. ಜಗದೀಶ ಶೆಟ್ಟರ್‌ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ಅವರು ಹೊರಗಿನವರು, ಬೆಳಗಾವಿ ಜಿಲ್ಲೆಗೆ ಅವರೇನೂ ಸಂಬಂಧ? ಹೀಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದರು. ಸರ್ಕಾರದ ಪಂಚ ಗ್ಯಾರಂಟಿ ಜೊತೆಗೆ ಮೃಣಾಲ ಹೆಬ್ಬಾಳಕರ ಮನೆ ಮಗ, ನನ್ನ ಮತ್ತು ನನ್ನ ಮಗನ ಮೈಯಲ್ಲಿ ವೀರರಾಣಿ ಚನ್ನಮ್ಮನ ರಕ್ತ ಹರಿಯುತ್ತಿದೆ. ಲಿಂಗಾಯತ ಪಂಚಮಸಾಲಿ ಸಮಾಜದವರು ನಾವು ಎಂದು ಟ್ರಂಪ್‌ ಕಾರ್ಡನ್ನೂ ಪ್ರಯೋಗ ಮಾಡಿದರು. ಶೆಟ್ಟರ್‌ ಅವರ ಅಡ್ರೇಸ್‌ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್‌ ಆರೋಪಗಳಿಗೆ ಮೌನದಿಂದ ಉತ್ತರ ನೀಡಿದ ಜಗದೀಶ ಶೆಟ್ಟರ್‌ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡುವ ಮೂಲಕ ತಮ್ಮ ಅಡ್ರೆಸ್‌ ಕೇಳಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಪ್ರತ್ಯುತ್ತರ ಕೊಟ್ಟರು. ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯ ಜನರು ಸ್ವಾಭಿಮಾನಿಗಳಾಗಿದ್ದಾರೆ. ಅವರೆಂದೂ ಹೊರಗಿನವರಿಗೆ ಮಣೆಹಾಕುವುದಿಲ್ಲ. ಬೀಗತಿಗೆ ಟಿಕೆಟ್‌ ತಪ್ಪಿಸಿ, ತಾವೇ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ ಎಂದು ಜಗದೀಶ ಶೆಟ್ಟರ್‌ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದರು. ತಮ್ಮ ಪುತ್ರನ ಗೆಲುವಿಗೆ ಇನ್ನಿಲ್ಲದ ಕಸರತ್ತು ಮಾಡಿದ್ದರು. ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ ಜೊತೆಗೆ ಲಕ್ಷ್ಮೀ ಹೆಬ್ಬಾಳಕರ ಜೊತೆಗೂಡಿಯೇ ಪ್ರಚಾರ ಕಾರ್ಯಮಾಡಿದ್ದರು. ಗೋಕಾಕ, ಅರಬಾವಿ. ರಾಮದುರ್ಗ, ಬೈಲಹೊಂಗಲ ಮತ್ತು ಸವದತ್ತಿ ಕ್ಷೇತ್ರಗಳಲ್ಲಿಯೇ ಹೆಚ್ಚಿನ ಪ್ರಚಾರಕಾರ್ಯ ಮಾಡಿದ್ದರು. ತಾವು ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿರುವುದು ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣ ಎನ್ನುವುದು ರಾಜಕೀಯ ವಿಶ್ಲೇಕರ ಅಭಿಪ್ರಾಯ. ರಾಜ್ಯಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳು ಕೂಡ ಅವರ ಕೈ ಹಿಡಿಯಲಿಲ್ಲ. ಹೀಗೆ ಹೀನಾಯವಾಗಿ ಕಾಂಗ್ರೆಸ್‌ ಸೋಲನುಭಸುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ.