ಮತಎಣಿಕೆ ಕೇಂದ್ರ ಹೊರಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

| Published : Jun 05 2024, 12:30 AM IST

ಸಾರಾಂಶ

ಸುರತ್ಕಲ್‌ ಎನ್‌ಐಟಿಕೆಯ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕ್ಯಾ.ಬ್ರಿಜೇಶ್‌ ಚೌಟ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಗೆಲುವು ಸಮೀಪಿಸುತ್ತಿದ್ದಂತೆ ಸುರತ್ಕಲ್‌ ಎನ್‌ಐಟಿಕೆಯ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕ್ಯಾ.ಬ್ರಿಜೇಶ್‌ ಚೌಟ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಸಂಭ್ರಮಿಸಿದರು.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭ ಆಗುವಾಗ ಮತ ಎಣಿಕೆ ಕೇಂದ್ರದ ಬಳಿ ಬೆರಳೆಣಿಕೆ ಕಾರ್ಯಕರ್ತರಿದ್ದರು. 11 ಗಂಟೆ ಆಗುವಾಗ ಅಲ್ಪ ಸಂಖ್ಯೆಯ ಕಾರ್ಯಕರ್ತರು ಆಗಮಿಸಿದರು. ಸುಮಾರು 2 ಗಂಟೆಯ ಬಳಿಕ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಜಮಾಯಿಸತೊಡಗಿದರು. ಬಿಜೆಪಿ ಅಭ್ಯರ್ಥಿ ಮುನ್ನಡೆ ಅಂತರ ಅಧಿಕವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಕಾರ್ಯಕರ್ತರ ಪಾಳಯದಲ್ಲಿ ಈ ಹಿಂದಿನ ಉತ್ಸಾಹ ಕಂಡುಬರಲಿಲ್ಲ. ಹಿಂದೆಲ್ಲ ಸಾವಿರಾರು ಮಂದಿ ಮತ ಎಣಿಕಾ ಕೇಂದ್ರದ ಹತ್ತಿರ ಜಮಾಯಿಸುತ್ತಿದ್ದರು. ಈ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿಗೆ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಕೂಡ ಕಾರ್ಯಕರ್ತರ ಸಂಖ್ಯೆ ಕಡಿಮೆಯಿತ್ತು. ಆದರೆ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿರುವ ಬಗ್ಗೆ ಪ್ರಕಟಣೆ ಹೊರಡಿಸಿದಾಗಲೆಲ್ಲಾ ಕಾರ್ಯಕರ್ತರ ಜೋಶ್‌ ಹೆಚ್ಚುತ್ತಿತ್ತು.ಕಾರ್ಯಕರ್ತರ ಜತೆ ಶಾಸಕರಾದ ಭರತ್‌ ಶೆಟ್ಟಿ, ಭಾಗೀರಥಿ ಮುರುಳ್ಯ ಸಂಭ್ರಮ ಹಂಚಿಕೊಂಡರು. ಅಂತಿಮ ಕ್ಷಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಜತೆಯಾದರು.ಬಿಜೆಪಿ ಕಚೇರಿಯಲ್ಲೂ ಸಂಭ್ರಮ:

ಕ್ಯಾ.ಬ್ರಿಜೇಶ್‌ ಚೌಟ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಚೇರಿ ಮುಂಭಾಗವೂ ಸಂಭ್ರಮಾಚರಣೆ ನಡೆಯಿತು. ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.