ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಉಪಾಧ್ಯಕ್ಷೆ

ಕನ್ನಡಪ್ರಭ ವಾರ್ತೆ ಕಾರವಾರ

ಪಕ್ಷದ ಸಂಘಟನೆಯಲ್ಲಿ ನಾವು ಮುಂಚೂಣಿಯಲ್ಲಿರಬೇಕು. ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.

ಶಿರಸಿಯ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ನಡೆದ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಜಾಗೃತರಾಗಬೇಕು. ಏಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ಮೋದಿ ಅವರ ಗುರಿ ಈಡೇರುವಲ್ಲಿ ನಾವೆಲ್ಲ ಕೈಜೋಡಿಸಬೇಕು. ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ನಾವು ಯಶಸ್ವಿಯಾಗಿಸೋಣ ಎಂದು ಹರ್ ಘರ್ ತಿರಂಗಾದ ರಾಜ್ಯ ಸಂಚಾಲಕಿಯೂ ಆಗಿರುವ ರೂಪಾಲಿ ಎಸ್.ನಾಯ್ಕ ತಿಳಿಸಿದರು.


ಹರ್ ಘರ್ ತಿರಂಗಾ ಅಭಿಯಾನ ನಾವೆಲ್ಲ ಹೆಮ್ಮೆಯಿಂದ ಪಾಲ್ಗೊಳ್ಳಬೇಕಾದ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ 12 ವರ್ಷಗಳ ಹಿಂದೆ ಆರಂಭಿಸಿದ ಈ ಅಭಿಯಾನ ಯಶಸ್ವಿಯಾಗಬೇಕು. ದೇಶಭಕ್ತಿ ಎಲ್ಲೆಡೆ ಮೊಳಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು.

ಮಾಜಿ ಶಾಸಕರಾದ ಸುನೀಲ್ ಹೆಗಡೆ, ಸುನೀಲ್ ನಾಯ್ಕ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಪ್ರಮುಖರಾದ ಕೆ.ಜಿ. ನಾಯ್ಕ್, ಗೋವಿಂದ ನಾಯ್ಕ್, ಅಶೋಕ ಛಲವಾದಿ, ಎಮ್.ಜಿ. ಭಟ್, ಸಂತೋಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು

ಹರ್ ಘರ್ ತಿರಂಗ ಸಂಚಾಲಕ ಸುಬ್ರಾಯ ವಾಳ್ಕೆ ಪ್ರಾಸ್ತಾವಿಕ ಮಾತು ಆಡಿದರು. ಆರ್.ಡಿ. ಹೆಗಡೆ ಎಸ್ ಐ ಆರ್ ಬಗ್ಗೆ ಮಾಹಿತಿ ನೀಡಿದರು.

ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿ ಮಂಡಲಕ್ಕೆ 500 ಧ್ವಜ ವಿತರಿಸಿದ ರೂಪಾಲಿ

ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿ ರೂಪಾಲಿ ಎಸ್.ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಮಂಡಲಕ್ಕೆ ತಲಾ 500 ಧ್ವಜ ವಿತರಿಸಿದರು.

ರಾಜ್ಯದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ರೂಪಾಲಿ ಎಸ್.ನಾಯ್ಕ ರಾಜ್ಯದ ವಿವಿಧೆಡೆ ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಅಭಿಯಾನದ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ.