ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ವಿರೋಧಿಸಿ ಬಿಜೆಪಿ ಮೌನ ಪ್ರತಿಭಟನೆ

| Published : Jan 04 2025, 12:33 AM IST

ಸಾರಾಂಶ

ಸಿದ್ದರಾಮಯ್ಯ ಮುಡಾದಲ್ಲಿ ಮಾಡಿರುವ ಕೆಲಸಕ್ಕೆ ಮುಡಾ ಇರುವವರೆಗೂ ಸ್ಥಿರ ಸ್ಥಾಯಿಯಾಗಿರುತ್ತಾರೆ. ಹೀಗಾಗಿ, ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ. ಮೈಸೂರಿನಲ್ಲಿ ನಿಮ್ಮ ಹೆಸರಿನ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇರಿಸಲಾಗಿದೆ. ಈ ವಿಚಾರವಾಗಿ ನಮಗೆ ಮುಖ್ಯಮಂತ್ರಿ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪ್ರಿನ್ಸಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು.

ನಗರದ ಯಾದವಗಿರಿಯ ಆಕಾಶವಾಣಿ ಎದುರಿನ ಚೆಲುವಾಂಬ ಪಾರ್ಕ್‌ ಬಳಿ ಜಮಾಯಿಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು, ಅಲ್ಲಿಂದ ಸ್ಯಾನಿಟೋರಿಯಂ ಆಸ್ಪತ್ರೆವರೆಗೂ ಪ್ರತಿಭಟನಾ ಮೆರವಣಿಗೆಗೆ ಮುಂದಾದರು. ಇದಕ್ಕೆ ಅವಕಾಶ ನೀಡದ ಪೊಲೀಸರು, ಬ್ಯಾರಿಕೇಡ್ ಅಳವಡಿಸಿ ಕಾರ್ಯಕರ್ತರನ್ನು ತಡೆದರು. ಹೀಗಾಗಿ, ಮೆರವಣಿಗೆ ಹೋಗಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಆದರೆ, ಪೊಲೀಸರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಪೊಲೀಸರು- ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಜೋರಾಯಿತು. ಅಂತಿಮವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು. ಬಳಿಕ ಪ್ರತಿಭಟನಾಕಾರರು ಚೆಲುವಾಂಬ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟಿಸಿದರು.

ಇಟ್ಟಿರುವ ಹೆಸರು ಬದಲಿಸಬೇಡಿ:

ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈಗಾಗಲೇ ರಸ್ತೆಗೆ ಇಟ್ಟಿರುವ ಹೆಸರನ್ನು, ಸರ್ಕಾರ ಏಕೆ ಬದಲಾವಣೆ ಮಾಡಲು ಮುಂದಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಇಟ್ಟಿರುವ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬೇಡಿ. ಇಟ್ಟಿರುವ ಹೆಸರನ್ನು ಬದಲಾಯಿಸಿ ದ್ವೇಷ ಮಾಡಬಾರದು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮುಡಾದಲ್ಲಿ ಮಾಡಿರುವ ಕೆಲಸಕ್ಕೆ ಮುಡಾ ಇರುವವರೆಗೂ ಸ್ಥಿರ ಸ್ಥಾಯಿಯಾಗಿರುತ್ತಾರೆ. ಹೀಗಾಗಿ, ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ. ಮೈಸೂರಿನಲ್ಲಿ ನಿಮ್ಮ ಹೆಸರಿನ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇರಿಸಲಾಗಿದೆ. ಈ ವಿಚಾರವಾಗಿ ನಮಗೆ ಮುಖ್ಯಮಂತ್ರಿ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು ಎಂದು ಕುಟುಕಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಯಶಸ್ವಿ ಸೋಮಶೇಖರ್, ಫಣೀಶ್, ಗಿರಿಧರ್, ಮಂಗಳಾ ಸೋಮಶೇಖರ್, ಕೇಬಲ್ ಮಹೇಶ್ ಮೊದಲಾದವರು ಇದ್ದರು.ವಾಹನಗಳ ಸಂಚಾರಕ್ಕೆ ಅಡಚಣೆ

ನಗರದ ಕೆಆರ್‌ಎಸ್ ರಸ್ತೆಯಲ್ಲಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ದಾಸಪ್ಪ ವೃತ್ತದಿಂದ ಒಂಟಿಕೊಪ್ಪಲು ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ವೃತ್ತದವರೆಗೆ ವಾಹನಗಳ ಸಂಚಾರಕ್ಕೆ ಸಂಚಾರ ಪೊಲೀಸರು ನಿರ್ಬಂಧ ವಿಧಿಸಿದ್ದರು. ಹುಣಸೂರು ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಇದರಿಂದ ಸಾವಿರಾರು ವಾಹನ ಚಾಲಕರು, ಸವಾರರು ತೊಂದರೆ ಅನುಭವಿಸಿದರು.

ಪ್ರಿನ್ಸಸ್ ರಸ್ತೆ ಬಗ್ಗೆ ಈಗಾಗಲೇ ನಮ್ಮ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರ ಪಾಲಿಕೆಯ ಆಯುಕ್ತರಿಗೆ ಸಾಕಷ್ಟು ದಾಖಲೆಗಳನ್ನು ಕೊಟ್ಟಿದ್ದಾರೆ. ಮಹರಾಜರ ಕಾಲದಲ್ಲಿ ಇಟ್ಟಿರುವ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಮಹಾರಾಜರ ಋಣ ನಮ್ಮ ಮೇಲಿದೆ. ಹೀಗಾಗಿ ಅವರ ಹೆಸರನ್ನು ಬದಲಿಸಲು ಬಿಡುವುದಿಲ್ಲ.

- ಪ್ರತಾಪ್ ಸಿಂಹ, ಮಾಜಿ ಸಂಸದ