ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಹಾಮಂಟಪ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

| Published : Jan 16 2025, 12:46 AM IST

ಸಾರಾಂಶ

ಆಚಾರ್ಯ ಗುಣಧರನಂದಿ ಮಹಾರಾಜರ ಸಂಕಲ್ಪಸಿದ್ದಿಯಂತೆ ಸುಮೇರು ಪರ್ವತ, ಪಂಚ ಕಲ್ಯಾಣ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು, ಯಶಸ್ವಿಯಾಗಲಿ.

ಹುಬ್ಬಳ್ಳಿ:

ತಾಲೂಕಿನ ವರೂರನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ 12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಜೀನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಮಹಾಮಂಟಪವನ್ನು ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ವಿಜಯೇಂದ್ರ, ವರೂರು ತೀರ್ಥಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಆಚಾರ್ಯ ಗುಣಧರನಂದಿ ಮಹಾರಾಜರ ಸಂಕಲ್ಪಸಿದ್ದಿಯಂತೆ ಸುಮೇರು ಪರ್ವತ, ಪಂಚ ಕಲ್ಯಾಣ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು, ಯಶಸ್ವಿಯಾಗಲಿ. ಜತೆಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ವರೂರು ತೀರ್ಥಕ್ಷೇತ್ರಕ್ಕೆ ಧನಸಹಾಯ ಮಾಡಿದ ಬಗ್ಗೆಯ ಪ್ರಸ್ತಾಪಿಸಿದರು.

ಈ ವೇಳೆ ಬಿ.ವೈ. ವಿಜಯೇಂದ್ರ ಅವರನ್ನು ಜೈನಮುನಿಗಳು ಸನ್ಮಾನಿಸಿದರು. ದಿಗಂಬರ ಜೈನ ಪಂಥದ ಮಹಾಗುರು ಆಚಾರ್ಯ ಶ್ರೀಗುರುದೇವ ಕುಂತುಸಾಗರ್‌ ಮಾಹಾರಾಜರು, ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಹಲವರಿದ್ದರು.