ವಿಧಾನ ಪರಿಷತ್‌ಗೆ ಒಂದೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ: ಕೋಟ

| Published : Sep 27 2024, 01:18 AM IST

ಸಾರಾಂಶ

ವಿಧಾನ ಪರಿಷತ್‌ಗೆ ಉಡುಪಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ಘೋಷಣೆ ಒಂದೆರಡು ದಿನಗಳಲ್ಲಿ ಆಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾನ ಪರಿಷತ್ ಗೆ ಉಡುಪಿ ಮತ್ತು ದ.ಕ. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ಘೋಷಣೆ ಒಂದೆರಡು ದಿನಗಳಲ್ಲಿ ಆಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸ್ಥಾನಕ್ಕೆ ಬಿಜೆಪಿಯಲ್ಲಿ ಸಾಕಷ್ಟು ಜನರು ಆಸಕ್ತರಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿಯವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ, ಪಕ್ಷದ ನಾಯಕರ ಮತ್ತು ಆಸಕ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆದು ಅಂತಿಮ ಪಟ್ಟಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಬಹುದೊಡ್ಡ ಅಂತರಿಂದ ಗೆಲ್ಲುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ರಾ.ಹೆ. ಉದ್ಘಾಟನೆಗೆ ಗಡ್ಕರಿ

ಉಡುಪಿ ಹೊರಭಾಗದ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬದ ಬಗ್ಗೆ ಖುದ್ದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿದ್ದೇನೆ. ಜನವರಿಯೊಳಗೆ ತಾನೇ ಈ ಹೆದ್ದಾರಿಯನ್ನು ಉದ್ಘಾಟಿಸುವುದಾಗಿ ಹೇಳಿದ್ದು, ಅದಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಮಲ್ಪೆ ಭೂಸ್ವಾಧೀನವಾಗಿಲ್ಲ

ಮಲ್ಪೆ - ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಬೇಕು, ಆದರೆ ಸರ್ಕಾರ ಭೂಸ್ವಾಧೀನ ಮಾಡದೇ ಕಾಮಗಾರಿ ವಿಳಂಬವಾಗಿದೆ. ಈಗ ಭೂ ಸ್ವಾಧೀನಕ್ಕೆ ಪ್ರಾರಂಭಿಕ ನೋಟಿಸ್ ಗಳನ್ನು ನೀಡಲಾಗಿದೆ. ಇಂದ್ರಾಳಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ರೈಲ್ವೆ ಇಲಾಖೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ. ನಾನು ಸಂಸದನಾದ ಮೇಲೆ ಅನುಮತಿ ಪಡೆದು ಕಾಮಗಾರಿ ಆರಂಭವಾಗಿದೆ ಎಂದರು.

150 ಕೋಟಿ ರು.ಗಳ ಆಸ್ಪತ್ರೆ

ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದ ಉಡುಪಿ ಜಿಲ್ಲೆಯಲ್ಲಿ 150 ಕೋಟಿ ರು. ವೆಚ್ಚದ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಸ್ಥಾಪನೆಗೆ ಅನುಮತಿ ಸಿಕ್ಕಿದ್ದು, 6 ಎಕರೆ ಭೂಮಿಯನ್ನು ಮೀಸಲಿರಿಸಲಾಗಿದೆ ಎಂದರು.