ಇಂದು ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

| Published : Jan 27 2024, 01:17 AM IST / Updated: Jan 27 2024, 12:32 PM IST

ಸಾರಾಂಶ

ವಿಜಯೇಂದ್ರ ಬಿಜೆಪ ರಾಜ್ಯ ಅಧ್ಯಕ್ಷ ಆದ ನಂತರದ ಮೊದಲ ಸಭೆ ನಡೆಯಲಿದೆ. ಇದರಲ್ಲಿ 900 ಆಹ್ವಾನಿತರು ಭಾಗಿಯಾಗಲಿದ್ದಾರೆ. ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿದೆ. 

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ 900ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

ಶುಕ್ರವಾರ ಕಾರ್ಯಕಾರಿಣಿ ನಡೆಯುವ ಸ್ಥಳದಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ನಮ್ಮ ಮುಂದಿನ ಕಾರ್ಯಯೋಜನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. 

ರಾಜ್ಯದಲ್ಲಿರುವ ಬಡವರು, ರೈತರು ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರಕಾರದ ಬಗ್ಗೆ ಜನರಿಗೆ ಸತ್ಯಾಂಶಗಳನ್ನು ತಲುಪಿಸಬೇಕು ಎಂದು ಉದ್ದೇಶಿಸಿದ್ದೇವೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಿಂದ ದೇಶಾದ್ಯಂತ ಜನತೆ ಮೋದಿ ಪರವಾಗಿದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. 

ಮೋದಿ ಅವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎಂಬುದನ್ನು ಸಾಬೀತು ಪಡಿಸುತ್ತೇವೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ತಿಳಿಸಿದರು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್‍ ಅವರು ಕಾರ್ಯಕಾರಿಣಿ ಉದ್ಘಾಟಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾದ ಬೊಮ್ಮಾಯಿ, ಜಗದೀಶ್ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರು ವೇದಿಕೆ ಮೇಲಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸುವ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮಾತನಾಡಿ, ಕಾರ್ಯಕಾರಿಣಿಗಾಗಿ ರಾಜ್ಯ ಘಟಕವು 10 ದಿನಗಳಿಂದ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದೆ.

 ಬೆಂಗಳೂರಿನ ಮೂರು ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳು, ಶಾಸಕರ ಮಾರ್ಗದರ್ಶನದಲ್ಲಿ ಸಭೆಯ ಯಶಸ್ಸಿಗೆ ಪೂರ್ವತಯಾರಿ ನಡೆದಿದೆ.

25ಕ್ಕೂ ಹೆಚ್ಚು ವೃತ್ತಗಳಲ್ಲಿ ಪ್ರಮುಖರಿಗೆ ಸ್ವಾಗತ ಕೋರುತ್ತಿದ್ದಾರೆ. ಅಪೇಕ್ಷಿತರಿಗೆ ವ್ಯವಸ್ಥಿತವಾಗಿ ವಾಹನ ವ್ಯವಸ್ಥೆ, ಕೊಠಡಿ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದು ವಿವರಿಸಿದರು.

ಕೇಂದ್ರದ ಜನಪರ ಯೋಜನೆಗಳ ಚರ್ಚೆ ನಡೆಯಲಿದೆ. ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಕುರಿತ ಪ್ರದರ್ಶಿನಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಡಿಜಿಟಲ್ ಎಂಟ್ರಿ ಮೂಲಕ ನೋಂದಣಿ ನಡೆಯಲಿದೆ. 

ಅಪೇಕ್ಷಿತರಿಗೆ ಹೊಸ ಅನುಭವ ಆಗುವ ಮಾದರಿಯಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕಾರಿಣಿ ನಡೆಯಲಿದೆ ಎಂದು ತಿಳಿಸಿದರು.