ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯವನ್ನೇ ದಿವಾಳಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸತತ ಮೂರು ವರ್ಷಗಳಿಂದ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಮಾಡಿ, ಬಡವರ ಕುತ್ತಿಗೆ ಮೇಲೆ ಕಾಲಿಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯವನ್ನೇ ದಿವಾಳಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸತತ ಮೂರು ವರ್ಷಗಳಿಂದ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಮಾಡಿ, ಬಡವರ ಕುತ್ತಿಗೆ ಮೇಲೆ ಕಾಲಿಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ₹ 8 ಏರಿಕೆ ಮಾಡಿದೆ. ಇದೀಗ ಬಸ್ ಪ್ರಯಾಣ ಟಿಕೆಟ್ ದರವನ್ನು ಶೇ.33 ರಷ್ಟು ಹೆಚ್ಚಳ ಮಾಡಿದೆ. ತಕ್ಷಣವೇ ಏರಿಕೆ ಮಾಡಿರುವ ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಇಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಇನ್ನು, ಕೃಷ್ಣಾ ನದಿಯ 40 ಟಿಎಂಸಿ ನೀರನ್ನು ಭೀಮಾನದಿ ಮೂಲಕ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಲು ಮಹಾರಾಷ್ಟ್ರ ಸರ್ಕಾರ ಡಿಪಿಆರ್ ಸಿದ್ಧಪಡಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲ ಆದರೂ ರಾಜ್ಯದ ನೀರಾವರಿ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳು ಏನು ಮಾಡುತ್ತಿವೆ?. ಮುಖ್ಯಮಂತ್ರಿಗಳಿಗೆ ಏಕೆ ಈ ವಿಷಯ ಗೊತ್ತಿಲ್ಲ. ಇದೆಲ್ಲವನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗದಲ್ಲಿ ವಿಫಲವಾಗಿದೆ. ತಕ್ಷಣವೇ ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗದ ಹಾಗೂ ಕಾನೂನು ತಜ್ಞರಿಂದ ಮಾಹಿತಿ ಪಡೆದು ಕೊಳ್ಳಬೇಕು. ಅಗತ್ಯ ಬಿದ್ದರೆ ಸರ್ವಪಕ್ಷಗಳೊಂದಿಗೆ ಕೇಂದ್ರಕ್ಕೆ ನಿಯೋಗ ಹೋಗಿ ರಾಜ್ಯಕ್ಕೆ ಮಾರಕವಾಗಲಿರುವ ಮಹಾರಾಷ್ಟ್ರದ ಯೋಜನೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣೆಯ ನೀರನ್ನು ನಮಗೆ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಬೆಳಗಾವಿ ವಿಭಾಗದ ಸಹಪ್ರಭಾರಿ ಬಸವರಾಜ ಯಂಕಂಚಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿ ಬಡವರ ಮೇಲೆ ಆರ್ಥಿಕ ಹೊರೆಹಾಕುತ್ತಿದೆ. ಇದು ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಲು, ಮೊಸರು, ಬಸ್ ದರ ಏರಿಸಿದ್ದರಿಂದ ಜನರು ಸರ್ಕಾರದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಬಸ್ ನಿಲ್ದಾಣಗಳಲ್ಲಿ ಹಾಗೂ ನಂದಿನಿ ಪಾರ್ಲರ್ಗಳ ಮುಂದೆ ದರ ಹಿಂಪಡೆಯುವಂತೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಮುಖಂಡ ಉಮೇಶ ಕಾರಜೋಳ ಮಾತನಾಡಿ, ಹಾಲಿನ ದರ ಏರಿಕೆ, ಬಸ್ ದರ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ದೀಪಾವಳಿಯ ಬಹುದೊಡ್ಡ ಉಡುಗೊರೆಯನ್ನು ಕೊಟ್ಟಿದೆ. ಹೈನುಗಾರಿಕೆಗೆಂದು ರೈತರಿಗೆ ಕೊಟ್ಟಿರುವ ₹ 7 ಪ್ರೋತ್ಸಾಹ ಧನಕ್ಕೆ ನಮ್ಮ ಸ್ವಾಗತವಿದೆ. ಆದರೆ, ಆ ಪ್ರೋತ್ಸಾಹ ಧನವನ್ನು ಜನರಿಂದ ವಸೂಲಿ ಮಾಡಿ ಕೊಡದೆ, ಸರ್ಕಾರ ತನ್ನ ಬೊಕ್ಕಸದಿಂದ ಕೊಡಬೇಕು. ಕಾಂಗ್ರೆಸ್ ಆಡಳಿತ ಹೀಗೆ ಮುಂದುವರಿದರೆ ರಾಜ್ಯದ ಜನತೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ ಬಿರಾದಾರ, ಈರಣ್ಣ ರಾವೂರ, ಚಿದಾನಂದ ಚಲವಾದಿ ಇತರರು ಇದ್ದರು.-------
ಕೋಟ್ಕೃಷ್ಣಾ ನದಿಯ 40 ಟಿಎಂಸಿ ನೀರನ್ನು ಭೀಮಾನದಿ ಮೂಲಕ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಲು ಮಹಾರಾಷ್ಟ್ರ ಸರ್ಕಾರ ಡಿಪಿಆರ್ ಸಿದ್ಧಪಡಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲ ಆದರೂ ರಾಜ್ಯದ ನೀರಾವರಿ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳು ಏನು ಮಾಡುತ್ತಿವೆ?. ಮುಖ್ಯಮಂತ್ರಿಗಳಿಗೆ ಏಕೆ ಈ ವಿಷಯ ಗೊತ್ತಿಲ್ಲ. ಇದೆಲ್ಲವನ್ನು ನೋಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗದಲ್ಲಿ ವಿಫಲವಾಗಿದೆ.ಗುರುಲಿಂಗಪ್ಪ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ