ಸಾರಾಂಶ
ಬಳ್ಳಾರಿ: ದೇಶದ ರಕ್ಷಣೆ ಹಾಗೂ ಸಮಗ್ರ ಭಾರತದ ಅಭಿವೃದ್ಧಿಗಾಗಿ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ನಗರದ ಹವಾಂಬಾವಿಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀ ಅರುಣಾ ಹಾಗೂ ಸೋಮಶೇಖರ ರೆಡ್ಡಿ ಅವರ ಸ್ಪರ್ಧೆಯಿಂದಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಯಿತು. ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಮರಳಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ನಾಯಕಿ ಲಕ್ಷ್ಮೀ ಅರುಣಾ ಮಾತನಾಡಿ, ಜನಾರ್ದನ ರೆಡ್ಡಿ ಬಿಜೆಪಿ ಸೇರುವುದಕ್ಕೂ ಮೊದಲು ಸಚಿವ ಬಿ. ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂತ ಪ್ರಚಾರ ಮಾಡಿದರು. ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಮೇಲೆ ನಾಗೇಂದ್ರ ಸೋಲಿನ ಭಯದಿಂದ ತಮ್ಮ ಅಣ್ಣನನ್ನು ಹಿಂದಕ್ಕೆ ಸರಿಸಿದ್ದಾರೆ. ತುಕಾರಾಂ ಸೋತರೆ ಸಚಿವ ಆಗುತ್ತಾರೆ. ಗೆದ್ದರೆ ಸಂಸದರಾಗುವ ಧೈರ್ಯದ ಮೇಲೆ ಎಲೆಕ್ಷನ್ ಗೆ ನಿಂತಿದ್ದಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಜನಾರ್ದನ ರೆಡ್ಡಿಯಂತ ನೂರು ರೆಡ್ಡಿ ಬಂದರೂ ಕಾಂಗ್ರೆಸ್ ನ್ನು ಏನು ಮಾಡಿಕೊಳ್ಳಲು ಆಗಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೂರು ಜನ ಜನಾರ್ದನ ರೆಡ್ಡಿ ಅಲ್ಲ, ಜನಾರ್ದನ ರೆಡ್ಡಿಯ ಒಬ್ಬ ಅಭಿಮಾನಿ ಸಾಕು ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸುತ್ತಾರೆ. ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು.
ಜನಾರ್ದನ ರೆಡ್ಡಿ ಸಹಾಯದಿಂದ ರಾಜಕೀಯಕ್ಕೆ ಬಂದಿರುವ ನೀವು, ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಸೇರಿದ್ದೀರಿ. ರೆಡ್ಡಿ ಬಗ್ಗೆ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಮುಖಂಡ ದಮ್ಮೂರು ಶೇಖರ್, ಗೋನಾಳ್ ರಾಜಶೇಖರಗೌಡ, ದರಪ್ಪ ನಾಯಕ, ಕೆ.ಎಸ್. ದಿವಾಕರ್, ಗಣಪಾಲ್ ಐನಾಥ ರೆಡ್ಡಿ, ಗುತ್ತಿಗನೂರು ವಿರೂಪಾಕ್ಷಗೌಡ ಸೇರಿದಂತೆ ಪಾಲಿಕೆ ಸದಸ್ಯರು, ನೂರಾರು ಕಾರ್ಯಕರ್ತರು ಇದ್ದರು.
ಸೋಮಶೇಖರ್ ಮುನಿಸು?ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಗೈರಾಗಿದ್ದರು. ಈ ಮೂಲಕ ರೆಡ್ಡಿ ಸಹೋದರರ ನಡುವಿನ ಅಸಮಾಧಾನ ಮುಂದುವರಿದಿರುವುದು ಸ್ಪಷ್ಟವಾಗಿ ಕಂಡು ಬಂತು. ಸೋಮಶೇಖರ ರೆಡ್ಡಿ ಗೈರು ಸಮಾರಂಭದಲ್ಲಿ ಎದ್ದು ಕಂಡಿತು. ಪಕ್ಷದ ಕಾರ್ಯಕರ್ತರ ನಡುವೆ ರೆಡ್ಡಿ ಗೈರು ಹೆಚ್ಚು ಚರ್ಚೆಯಾಯಿತು.
ಜನಾರ್ದನ ರೆಡ್ಡಿ ಚಾಣಕ್ಯ:ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಆನಂದ ಸಿಂಗ್, ನಾನು ಸೇರಿ ಯಡಿಯೂರಪ್ಪ ಜತೆಗೆ ಪಂಚ ಪಾಂಡವರಂತೆ ಕೆಲಸ ಮಾಡಿದ್ದೇವೆ. ಚಾಣಿಕ್ಯರ ಬುದ್ಧಿವಂತಿಕೆ ಹೊಂದಿರುವ ಜನಾರ್ದನ ರೆಡ್ಡಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದರು. ಯಡಿಯೂರಪ್ಪ ಜತೆಗೆ ಸೇರಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿದರು. ಜನಾರ್ದನ ರೆಡ್ಡಿ ಜತೆಗೆ 35 ವರ್ಷ ರಾಜಕೀಯ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಮತ್ತು ನಾವು ಒಡೆದು ಬೇರೆಯವರಿಗೆ ಲಾಭ ಮಾಡಿಕೊಟ್ಟಿದ್ದೇವೆ ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.