ಮೋದಿ ಸಾಧನೆ, ಕಾಂಗ್ರೆಸ್ ವೈಫಲ್ಯಗಳ ಕರಪತ್ರ ಬಿಡುಗಡೆ

| Published : Apr 06 2024, 12:45 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಹಾಗೂ ಕೆಟ್ಟ ಆರ್ಥಿಕ ನೀತಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಬೊಕ್ಕಸ ಸಂಪೂರ್ಣವಾಗಿ ಬರಿದಾಗಿದೆ. ರಾಜ್ಯ ಸಂಪೂರ್ಣ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರವೊಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಈ ಪರಿ ಹದಗೆಡಿಸಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕಳೆದ ೧೦ ತಿಂಗಳಲ್ಲಿ ಮಾಡಿದ್ದು ಕೇವಲ ಕಲೆಕ್ಷನ್, ಕಮಿಷನ್ ಮತ್ತು ಕರಪ್ಷನ್ ಮಾತ್ರ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದರು.

ನಗರದ ಬಿಜೆಪಿ ವಿಕಾಸ ಭವನದಲ್ಲಿ ಮೋದಿ ಸಾಧನೆ ಹಾಗೂ ಕಾಂಗ್ರೆಸ್ ವೈಫಲ್ಯಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದಲ್ಲಿ ೯೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರೈತರಿಗೆ ಆತ್ಮಸ್ಥೈರ್ಯ ತುಂಬಲು ಕಾರ್ಯಕ್ರಮಗಳೇ ಇಲ್ಲ. ಸರ್ಕಾರ ಇದ್ದೂ ಸತ್ತಂತಾಗಿದೆ. ಗಲಭೆಕೋರ ಪಿಎಫ್‌ಐ ಕಾರ್ಯಕರ್ತರ ಕೇಸು ಖುಲಾಸೆ ಮಾಡುತ್ತಾ, ಇನ್ನೊಂದೆಡೆ ರಾಮಭಕ್ತ ಕರಸೇವಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೂ ವಿರೋಧಿ ತುಷ್ಠೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ತಿಳಿಸಿದರು.

ಬಿಜೆಪಿ ಸರ್ಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ೪ ಸಾವಿರ ರು. ಕೊಡುತ್ತಿತ್ತು. ಮೋದಿಯವರು ೬ ಸಾವಿರ ಕೊಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅದನ್ನು ಸ್ಥಗಿತಗೊಳಿಸಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಹಾಗೂ ಕೆಟ್ಟ ಆರ್ಥಿಕ ನೀತಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಬೊಕ್ಕಸ ಸಂಪೂರ್ಣವಾಗಿ ಬರಿದಾಗಿದೆ. ರಾಜ್ಯ ಸಂಪೂರ್ಣ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರವೊಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಈ ಪರಿ ಹದಗೆಡಿಸಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲಾಗಿದೆ ಎಂದು ದೂರಿದರು.

ಬಿಜೆಪಿ ಮುಖಂಡರಾದ ನಾಗಾನಂದ, ಶಿವಕುಮಾರ್ ಕೆಂಪಯ್ಯ, ಪ್ರಸನ್ನಕುಮಾರ್, ಶಿವಲಿಂಗಯ್ಯ, ಭೀಮೇಶ್, ಸಾತನೂರು ಯೋಗೇಶ್, ಪದ್ಮಾ, ಜ್ಯೋತಿ ಕೃಷ್ಣೇಗೌಡ, ಶಂಕರ್, ಧರಣಿ, ಶಶಿಕುಮಾರ್ ಇತರರಿದ್ದರು.