ಸಾರಾಂಶ
ದಾವಣಗೆರೆ/ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಪಕ್ಷದ ಭಿನ್ನರ ಪಡೆಯ ವಿರುದ್ಧ ಆಕ್ರೋಶಗೊಂಡಿರುವ ವಿಜಯೇಂದ್ರ ನಿಷ್ಠ ಮಾಜಿ ಸಚಿವರು, ಮಾಜಿ ಶಾಸಕರು ದಾವಣಗೆರೆಯಲ್ಲಿ ಶನಿವಾರ, ಭಾನುವಾರ ಸಭೆ ನಡೆಸಿದ್ದಾರೆ. ಫೆ.27ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು, ಆ ಸಮಾರಂಭಕ್ಕೆ ಕೇಂದ್ರ ನಾಯಕರನ್ನು ಆಹ್ವಾನಿಸಿ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆವರೆಗೂ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಒತ್ತಾಯ ಮಂಡಿಸಿದ್ದಾರೆ.
ಆದರೆ ಉದ್ದೇಶಿತ ಯಡಿಯೂರಪ್ಪ ಉತ್ಸವಕ್ಕೆ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗುವುದಿಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ.
ಬಿವೈವಿ ನಿಷ್ಠರಿಂದ ಸಭೆ:
ದಾವಣಗೆರೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ವಿಜಯೇಂದ್ರ ಪರ ಬಿಜೆಪಿ ನಾಯಕರು ಸಭೆ ನಡೆಸಿದರು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಮತ್ತಿತರ ನಾಯಕರು ಇದರಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ನಾಯಕರು, ಈ ಹಿಂದೆ ಯಡಿಯೂರಪ್ಪನವರು ದಾವಣಗೆರೆಯಲ್ಲೇ ಜನ್ಮದಿನ ಆಚರಿಸಿದ ನಂತರ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.27ರಂದು ದಾವಣಗೆರೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಮೂಲಕ ಯಡಿಯೂರಪ್ಪ ಜನ್ಮದಿನ ಆಚರಿಸಲಾಗುವುದು. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ ಸಿಂಗ್‌ರನ್ನು ಆಹ್ವಾನಿಸಲಾಗುವುದು. ಬಿಎಸ್‌ವೈ ಜನ್ಮದಿನ ಬಿಜೆಪಿಯ ಶಕ್ತಿ ಪ್ರದರ್ಶನವಾಗಲಿದೆ ಎಂದರು. ಆ ಮೂಲಕ ಯತ್ನಾಳ್ ಬಣಕ್ಕೆ ಪರೋಕ್ಷ ಎಚ್ಚರಿಕೆ ನೀಡುವ ಮಾತುಗಳನ್ನು ಆಡಿದರು.
ಗೊಂದಲ ಮೂಡಿಸಬೇಡಿ- ಬಿವೈವಿ:
ಈ ಮಧ್ಯೆ, ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕೀಯಕ್ಕೆ ಅವಕಾಶ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗುವುದಿಲ್ಲ. ಮುಖಂಡರ ನಡವಳಿಕೆಯಿಂದ ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿದೆ. ಈ ರೀತಿ ಮತ್ತಷ್ಟು ಸಭೆ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು ಎಂದು ಸೂಚನೆ ನೀಡಿದರು.
ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಲಾಗುವುದು. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರ ಜತೆ ಚರ್ಚೆ ನಡೆಸಲು ಶೀಘ್ರದಲ್ಲೇ ಸಭೆ ಕರೆಯಲಾಗುವುದು ಎಂದು ಹೇಳಿದರು.
ಸಮಾವೇಶ ಅಥವಾ ಯಾವುದೇ ಕಾರ್ಯಕ್ರಮ ನಮ್ಮ ಕಣ್ಮುಂದೆ ಇಲ್ಲ. ಇಂತಹ ಕಪೋಲಕಲ್ಪಿತ ವಿಚಾರಗಳಿಗೆ ಯಾರೂ ಕೂಡ ಕಿವಿಗೊಡಬಾರದು. ಬಿಜೆಪಿ ಕೂಡು ಕುಟುಂಬವಿದ್ದಂತೆ. ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಕಾರ್ಯಕ್ರಮಗಳು ನಡೆಯಬೇಕು. ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಲ್ಲ ಎಂದು ಹೇಳಿದರು.