- ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಲಿದೆ: ಶ್ರೀನಿವಾಸ, ಯಶವಂತರಾವ್, ಅಜಯಕುಮಾರ ವಿಶ್ವಾಸ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾಂಗ್ರೆಸ್ಸಿನ ದುರಾಡಳಿತದ ಜೊತೆಗೆ ಮೂರು ದಶಕದಿಂದ ಯಾವುದೇ ಅಭಿವೃದ್ಧಿ ಕೈಗೊಂಡಿಲ್ಲ ಎಂಬುದೂ ಸೇರಿದಂತೆ ಅನೇಕ ವಿಷಯಗಳು ದಾವಣಗೆರೆ ದಕ್ಷಿಣದಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಿದ್ದು, ಇಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಘೋಷಣೆ ನಂತರ ಯಶವಂತ ರಾವ್ ಜಾಧವ್, ಬಿ.ಜಿ. ಅಜಯಕುಮಾರ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ಬಿ.ಎಂ.ಸತೀಶ, ಎಚ್.ಸಿ.ಜಯಮ್ಮ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕ್ಷೇತ್ರದಲ್ಲಿ ನನಗೆ ಸಹಕಾರ ನೀಡಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮ, ಮತದಾರರ ಆಶೀರ್ವಾದದಿಂದ ಗೆಲ್ಲುತ್ತೇನೆಂಬ ಸಂಪೂರ್ಣ ನಂಬಿಕೆ ಇದೆ ಎಂದರು.ಪ್ರತಿಯೊಬ್ಬ ಟಿಕೆಟ್ ಆಕಾಂಕ್ಷಿ, ಕಾರ್ಯಕರ್ತರು ತಾವೇ ಅಭ್ಯರ್ಥಿಗಳಂತೆ ಇಡೀ ಕ್ಷೇತ್ರಾದ್ಯಂತ ಕೆಲಸ ಮಾಡಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ. ಎಲ್ಲರ ಒಗ್ಗಟ್ಟು, ಒಂದಾಗಿ ಕೆಲಸ ಮಾಡಿದ್ದಾರೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಗಲಿರುಳು ಶ್ರಮಿಸಿದ್ದು, ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬರ ಶ್ರಮಕ್ಕೆ ಮೇ 4ರಂದು ಪ್ರತಿಫಲ ಸಿಗಲಿದೆ ಎಂದು ಅವರು ತಿಳಿಸಿದರು.
ನಾವು ಪ್ರಚಾರಕ್ಕೆ ಹೋದ ಕಡೆಗೆಲ್ಲಾ ಮತದಾರರು ಪ್ರೀತಿ, ವಿಶ್ವಾಸದಿಂದ ಸ್ವಾಗತಿಸಿ, ಬೆಂಬಲ ಸೂಚಿಸಿದರು. ದಕ್ಷಿಣದಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕು. ಬದಲಾವಣೆ ಆಗಬೇಕಿದೆ ಅಂದಿದ್ದಲ್ಲೆ, ಏ.9ರಂದು ನಮ್ಮ ಮೇಲೆ ವಿಶ್ವಾಸವಿಟ್ಟು, ಮತ ನೀಡಿದ್ದಾರೆ. ಆ ಎಲ್ಲರ ವಿಶ್ವಾಕ್ಕೆ ನಾನು ಸದಾ ಚಿರಋಣಿ. ನಮ್ಮೆಲ್ಲಾ ನಾಯಕರು, ಮುಖಂಡರು, ಜಿಲ್ಲೆಯ ನಾಯಕರು, ಕಾ ರ್ಯಕರ್ತರು, ಪಕ್ಷದ ಬೆಂಬಲಿಗರ ಆಶೀರ್ವಾದದಿಂದ ದಕ್ಷಿಣದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯ ಸಾಧಿಸಲಿದೆ ಎಂದು ಅವರು ಹೇಳಿದರು.
ಮಾಜಿ ಮೇಯರ್ ಬಿ.ಜಿ. ಅಜಯಕುಮಾರ ಮಾತನಾಡಿ, ದಿವಂಗತ ಶಾಮನೂರು ಶಿವಶಂಕರಪ್ಪನವರ ಬಗ್ಗೆ ನಮಗೆ ಅಪಾರ ಗೌರವವಿದೆ. 3 ದಶಕ ಕಾಲ ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಜನರೇ ಹೇಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದು, ನಮ್ಮ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಕನಿಷ್ಠ 15-20 ಸಾವಿರ ಮತಗಳ ಅಂತರದಲ್ಲಿ ಜಯ ದಾಖಲಿಸುವುದು ಶತಃಸಿದ್ಧ ಎಂದರು.
ಚುನಾವಣೆ ಮುಗಿಯುತ್ತಿದ್ದಂತೆ ಅನೇಕ ಕಡೆ ನಮ್ಮ ಕಾರ್ಯಕರ್ತರು ಪಟಾಕಿ, ಸಿಡಿಸಿ ಸಂಭ್ರಮಿಸುವ ಉತ್ಸಾಹ ನೋಡಿದರೆ ಮೇ 4ರಂದು ಅದ್ಧೂರಿಯಾಗಿ ವಿಜಯೋತ್ಸವ ಆಚರಿಸಲು ತುದಿಗಾಲ ಮೇಲೆ ನಿಂತಿರುವುದು ಕಂಡುಬರುತ್ತಿದೆ. ನಮ್ಮ ಮನೆಗಳ ಮುಂದೆ ನಾವು ಪಟಾಕಿಗಳನ್ನು ಸಿಡಿಸಿದ್ದೇವೆ. ಇದು ನಮ್ಮ ಸಂಸ್ಕೃತಿ. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ವೇಳೆ ನನ್ನ ಮನೆ ಮುಂದೆ ಕಾಂಗ್ರೆಸ್ಸಿಗರು ಪಟಾಕಿ ಹಚ್ಚಿದ್ದರು. ಅದು ಕಾಂಗ್ರೆಸ್ಸಿಗರ ಸಂಸ್ಕೃತಿ ಎಂದು ಅವರು ಹೇಳಿದರು.ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ಜನರಿಗೆ ನೀತಿ, ನೈತಿಕತೆ ಪಾಠ ಮಾಡುವ ಸಚಿವರು ಮತದಾನದ ದಿನ ದಕ್ಷಿಣ ಕ್ಷೇತ್ರದ ಮತಕೇಂದ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ, ಪ್ರಚಾರ ಮಾಡಿದ್ದಾರೆ. ಹಾಗಿದ್ದರೆ ಸಚಿವರ ನೈತಿಕತೆ ಎಲ್ಲಿ ಹೋಯಿತು? ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಹೋದರೆ ಗಂಟೆಗಟ್ಟಲೇ ಕಾಯಬೇಕಾಯಿತು. ಚುನಾವಣಾಧಿಕಾರಿ ವಿನಾಕಾರಣ ನಮ್ಮನ್ನು ಕಾಯಿಸಿದರು. ನಮ್ಮ ದೂರಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದು ಎಚ್ಚರಿಸಿದರು.
ಉತ್ತರ ಕ್ಷೇತ್ರದ ಶಾಸಕರಾದ ಸಚಿವರು ಉಪ ಚುನಾವಣೆಯ ದಕ್ಷಿಣದ ಬೂತ್‌ಗಳಲ್ಲಿ ಸುತ್ತಾಡುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರಿದರೆ, ಲೊಕೇಷನ್ ತೋರಿಸಿ ಅಂತಾ ನಮ್ಮನ್ನು ಕೇಳುತ್ತಾರೆ. ಇದರ ಅರ್ಥವೇನು? ದಕ್ಷಿಣದಲ್ಲಿ ನಮ್ಮ ಗೆಲುವು ಶತಃಸಿದ್ಧ. ದಕ್ಷಿಣದಲ್ಲಿ ಮೊದಲ ಸಲ ಕಮಲ ಅರಳಲಿದ್ದು, ಇದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಯಶವಂತ ರಾವ್ ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯರಾದ ಎಂ.ಹಾಲೇಶ, ಶಿವನಗೌಡ ಟಿ.ಪಾಟೀಲ. ಎಚ್.ಸಿ. ಜಯಮ್ಮ, ಟಿಂಕರ್ ಮಂಜಣ್ಣ, ಗುರುಶಾಂತ ಸೋಗಿ ಇತರರು ಇದ್ದರು.
- - --10ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಯಶವಂತ ರಾವ್ ಜಾಧವ್, ಬಿ.ಜಿ. ಅಜಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.