ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಓಲೈಕೆ ರಾಜಕೀಯ ಮಾಡಲು ಮುಂದಾಗಿದೆ. ಸಂವಿಧಾನದ ಆಶಯ, ಹಕ್ಕುಗಳನ್ನು ವಿರೋಧಿಸುವುದು, ಕಿತ್ತುಕೊಳ್ಳುವುದು ಕಾಂಗ್ರೆಸ್ ರಕ್ತಗತವಾಗಿ ಬಂದಿದೆ. ಬಲಪಂಥೀಯ ರಾಜಕಾರಣಿಗಳನ್ನು ಧಮನ ಮಾಡುವ ಹುನ್ನಾರ ನಡೆಸುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ದ್ವೇಷ ಭಾಷಣದ ವಿಧೇಯಕ ಜಾರಿಗೆ ತರಲು ಮುಂದುದಾಗಿರುವ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಐದುದೀಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ್ ಕಚೇರಿ ಎದುರು ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಉಪ ತಹಸೀಲ್ದಾರ್ ಸಂತೋಷ್ ಅವರಿಗೆ ಮನವಿ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣದ ವಿಧೇಯಕವನ್ನು ಜಾರಿಗೆ ತರುವ ಮೂಲಕ ಸಂವಿಧಾನದಲ್ಲಿ ಜನರಿಗೆ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಿತ್ತು ಕೊಳ್ಳುವ ಕೆಲಸ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಓಲೈಕೆ ರಾಜಕೀಯ ಮಾಡಲು ಮುಂದಾಗಿದೆ. ಸಂವಿಧಾನದ ಆಶಯ, ಹಕ್ಕುಗಳನ್ನು ವಿರೋಧಿಸುವುದು, ಕಿತ್ತುಕೊಳ್ಳುವುದು ಕಾಂಗ್ರೆಸ್ ರಕ್ತಗತವಾಗಿ ಬಂದಿದೆ. ಬಲಪಂಥೀಯ ರಾಜಕಾರಣಿಗಳನ್ನು ಧಮನ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ಕನ್ನಡಪರ ಚಳವಳಿ, ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ. ಹಾಗಾಗಿ ರಾಜ್ಯಪಾಲರು ಈ ವಿಧೇಯಕಕ್ಕೆ ಅನುಮೋದನೆ ನೀಡಿದೆ ತಿರಸ್ಕೃರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ಧನಂಜಯ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳನವೀನ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಕೆ.ಎಲ್.ಆನಂದ್, ಮಂಜುನಾಥ್, ಸೋಮಶೇಖರ್, ಅಶೋಕ್, ರಾಜ್ ಕುಮಾರ್, ಚಿಕ್ಕಮರಳಿನವೀನ್, ಕಿರಣ್, ಶ್ರೀನಿವಾಸ್ ನಾಯ್ಕ, ಡೇರಿ ರಾಮು, ಮಹೇಶ್, ಈರೇಗೌಡ, ಸೇರಿದಂತೆ ಹಲವರು ಇದ್ದರು.