ಬಿಹಾರದಲ್ಲಿ ಬಿಜೆಪಿದು ಮೋಸದ ಗೆಲವು: ಲಾಡ್‌

| Published : Nov 20 2025, 12:45 AM IST

ಸಾರಾಂಶ

ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲಿಯೂ ನೋಡಿಯೇ ಇಲ್ಲ. ಚುನಾವಣಾ ಆಯೋಗವು ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ ಇಂಡಿ ಗಟಬಂಧನಗೆ ಮುನ್ನಡೆ ದೊರೆತಿತ್ತು.

ಹುಬ್ಬಳ್ಳಿ:

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆಲುವು ಸಾಧಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲಿಯೂ ನೋಡಿಯೇ ಇಲ್ಲ. ಚುನಾವಣಾ ಆಯೋಗವು ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ ಇಂಡಿ ಗಟಬಂಧನಗೆ ಮುನ್ನಡೆ ದೊರೆತಿತ್ತು. ಆದರೆ, ಇವಿಎಂನಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಅಲ್ಲಿನ ಗೋಲ್‌ಮಾಲ್‌ಗೆ ಚುನಾವಣೆಯ ಅಂಕಿ ಅಂಶಗಳೇ ಸಾಕ್ಷಿ ಎಂದರು.

ರಾಜ್ಯದಲ್ಲಿ ಅಧಿಕಾರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್, ಈ ಕುರಿತು ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಕಬ್ಬು ಬೆಳೆ ಸಮಸ್ಯೆ ಸೇರಿದಂತೆ ಐದು ಪ್ರಮುಖ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿಯೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕರೆಯಲಾಗುತ್ತಿದೆ. ಇಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲಿಡಲಾಗುತ್ತಿದೆ. ಅದೇ ರೀತಿ ಮುಂದಿನ ಚಳಿಗಾಲದ ಅಧಿವೇಶನದಲ್ಲೂ ಈ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ದೆಹಲಿಯಲ್ಲಿ ಬಾಂಬ್‌ ಬ್ಲಾಸ್ಟ್ ಆದಾಗ ಪ್ರಧಾನಿ ನರೇಂದ್ರ ಮೋದಿ ಭೂತಾನ ರಾಜನ ಜನ್ಮದಿನಕ್ಕೆ ತೆರಳಿದ್ದರು. ಸ್ಫೋಟದಲ್ಲಿ ಅಮಾಯಕರು ಜೀವ ಕಳೆದುಕೊಂಡರೂ ಸಹ ಪ್ರಧಾನಿ ಘಟನೆ ನಡೆದ ತಕ್ಷಣವೇ ಮರಳಿ ಬರಲಿಲ್ಲ ಎಂದು ಲಾಡ್‌ ಹೇಳಿದರು.