ಸಾರಾಂಶ
ಬಳ್ಳಾರಿ: ಪಕ್ಷದ ಕಾರ್ಯಕರ್ತರ ಹರ್ಷೋದ್ಗಾರ, ಆಯಾ ಪಕ್ಷಗಳ ರಾಷ್ಟ್ರೀಯ ನಾಯಕರ ಪರ ಜೈಕಾರಗಳ ನಡುವೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಶುಕ್ರವಾರ ಉಮೇದುವಾರಿಕೆ ಸಲ್ಲಿಸಿದರು. ಈ ಮೂಲಕ ಗಣಿನಾಡಿನ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿದೆ.
ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು, ಜಿಲ್ಲಾ ಚುನಾವಣೆ ಅಧಿಕಾರಿ ಪ್ರಶಾಂತಕುಮಾರ್ ಮಿಶ್ರಾಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಪಕ್ಷದ ಹಿರಿಯ ನಾಯಕರು ಜೊತೆಗಿದ್ದು ಸಾಥ್ ನೀಡಿದರು.ಇಲ್ಲಿನ ಎಸ್ಪಿ ವೃತ್ತದಿಂದ ಬಿಜೆಪಿ ಮೆರವಣಿಗೆ ಆರಂಭವಾಯಿತು. ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿದ್ದ ತೆರೆದ ವಾಹನದಲ್ಲಿ ಬಿ.ಶ್ರೀರಾಮುಲು, ಪತ್ನಿ ಲಕ್ಷ್ಮೀ, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಮಾಜಿ ಸಚಿವ ಆನಂದಸಿಂಗ್, ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಚಿತ್ರನಟಿ ಶ್ರುತಿ, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಶ್ರೀರಾಮುಲು ಜೊತೆ ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಮೆರವಣಿಗೆ ಮುನ್ನ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮೋತಿ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗಣಪತಿ ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಸಚಿವ ಜಮೀರ್ ಅಹ್ಮದ್, ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಮಾಜಿ ಶಾಸಕ ಭೀಮಾನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ತೆರೆದ ಮೆರವಣಿಗೆಯಲ್ಲಿ ಗಡಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಮೆರವಣಿಗೆ ಶುರು ಮುನ್ನ ಪಕ್ಷದ ಕಾರ್ಯಕರ್ತರು ಜೆಸಿಬಿಗಳ ಮೂಲಕ ಪಕ್ಷದ ನಾಯಕರಿಗೆ ಹೂವಿನ ಮಳೆಗರೆದರು.ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಹೀಗಾಗಿ, ನಗರದ ರಾಯಲ್ ವೃತ್ತ, ಎಸ್ಪಿ ಸರ್ಕಲ್, ಮೋತಿ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಾಹನ ಸವಾರರು ಪರದಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇತ್ತು. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಬಿಸಿಲನ್ನೂ ಲೆಕ್ಕಿಸದೆ ಎರಡು ಪಕ್ಷಗಳ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಕೈ ನಾಯಕರ ಎದುರು ಮೋದಿ ಘೋಷಣೆ:
ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ನಾಮಪತ್ರ ಸಲ್ಲಿಸಿ ಮರಳುತ್ತಿದ್ದ ವೇಳೆ ಕೈ ನಾಯಕರನ್ನು ನೋಡಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ತುಕಾರಾಂ ಪರ ನಾಮಪತ್ರ ಸಲ್ಲಿಸಿ, ಸಚಿವ ನಾಗೇಂದ್ರ, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಮತ್ತಿತರ ನಾಯಕರು ತೆರಳುತ್ತಿದ್ದರು. ಇದೇ ವೇಳೆ ಶ್ರೀರಾಮುಲು ಪರ ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಕೈ ನಾಯಕರು ಎದುರಾಗುತ್ತಿದ್ದಂತೆಯೇ ಮೋದಿ ಮೋದಿ ಎಂದು ಘೋಷಣೆ ಹಾಕಿದರು.ದರ್ಗಾಕ್ಕೆ ಭೇಟಿ ನೀಡಿದ ತುಕಾರಾಂ:
ನಾಮಪತ್ರ ಸಲ್ಲಿಕೆ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಕೌಲ್ ಬಜಾರ್ ಪ್ರದೇಶದ ದಿವಾನ್ ಮಸಾನ್ ಈರ್ಷಾದ ಅಲಿ ಬಾಬಾ ದರ್ಗಾಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಮಾಜಿ ಶಾಸಕ ಕೆಎಸ್‌ಎಲ್ ಸ್ವಾಮಿ ಜೊತೆಗಿದ್ದರು. ಪಾದಯಾತ್ರೆ ವೇಳೆ ಬಳ್ಳಾರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಈ ದರ್ಗಾಕ್ಕೆ ಭೇಟಿ ನೀಡಿದ್ದರು.ಪಟಾಕಿ ಕಿಡಿಯಿಂದ ಮರಗಳಿಗೆ ಬೆಂಕಿ:
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ನಾಮಪತ್ರ ಸಲ್ಲಿಸುವ ಮುನ್ನ ಜರುಗಿದ ಮೆರವಣಿಗೆ ವೇಳೆ ಎಸ್ಪಿ ವೃತ್ತದಲ್ಲಿ ಕಾರ್ಯಕರ್ತರು ಹಚ್ಚಿದ ಪಟಾಕಿಯ ಬೆಂಕಿ ಸಿಡಿದು ಎಸ್ಪಿ ಮನೆಯ ಆವರಣದಲ್ಲಿನ ಕೆಲ ಮರಗಳಿಗೆ ಬೆಂಕಿ ಹತ್ತಿಕೊಂಡಿತು. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು.ಆ್ಯಂಬುಲೆನ್ಸ್ ಗೆ ತಡೆ:
ನಾಮಪತ್ರ ಸಲ್ಲಿಕೆ ಜನ ಭರಾಟೆಯಿಂದಾಗಿ ರೋಗಿಯನ್ನು ಹೊತ್ತು ತೆರಳುತ್ತಿದ್ದ ಆ್ಯಂಬುಲೆನ್ಸ್‌ಗೆ ಕೆಲ ಹೊತ್ತ ತಡೆಯಾಯಿತು. ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ಎರಡು ಪಕ್ಷಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೀಗಾಗಿ, ಆ್ಯಂಬುಲೆನ್ಸ್ ತೆರಳಲು ಅಡ್ಡಿಯಾಯಿತು. ಪೊಲೀಸರು ಕೂಡಲೇ ತೆರಳಿ ಜನರನ್ನು ಚದುರಿಸಿ, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು.ರಾಹುಕಾಲ ಎಂದು ಅವಸರವಾಗಿ ಬಂದ ತುಕಾರಾಂ:
ನಾಮಪತ್ರ ಸಲ್ಲಿಕೆಗೆ ಮೆರವಣಿಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ರಾಹುಕಾಲ ಬರುತ್ತದೆ ಎಂದು ಅವಸರವಾಗಿ ಬಂದು ನಾಮಪತ್ರ ಸಲ್ಲಿಸಿದ ಘಟನೆ ಜರುಗಿತು.ಹೊಸಪೇಟೆ ಶಾಸಕ ಗವಿಯಪ್ಪ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ತುಕಾರಾಂ ಮಗಳು ಸೌಪರ್ಣಿಕಾ ಅವರು ಸಾಥ್ ನೀಡಿದರು.
ಬಳ್ಳಾರಿ ಗೆದ್ದು ಸೋನಿಯಾಗೆ ಉಡುಗೊರೆ:ಉಮೇದುವಾರಿಕೆ ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿಗೆ ಉಡುಗೊರೆಯಾಗಿ ನೀಡಲಾಗುವುದು. ಬಿಜೆಪಿ ಅಭ್ಯರ್ಥಿ ಸೋಲು ಕಟ್ಟಿಟ್ಟ ಬುತ್ತಿ. ಜಿಲ್ಲೆಯ ಪ್ರಜ್ಞಾವಂತರು ಕಾಂಗ್ರೆಸ್ ಅನ್ನು ಚುನಾಯಿಸುತ್ತಾರೆ ಎಂದು ಹೇಳಿದರು.
ಕದ್ದಾಲಿಕೆ ಪ್ರಕರಣ ತನಿಖೆ ನಡೆಸುತ್ತೇವೆ:ಸಚಿವ ಬಿ.ಎಂ. ಪಾಟೀಲ್ ಮಾತನಾಡಿ, ಗಣಿಜಿಲ್ಲೆಯ ಅಪಾರ ಸಂಪತ್ತು ಲೂಟಿ ಮಾಡಿದವರಿಗೆ ಜನರು ಅಧಿಕಾರ ನೀಡಬಾರದು ಎಂದು ಮನವಿ ಮಾಡಿದರು. ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ಮಾಡಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಕದ್ದಾಲಿಕೆ ಪ್ರಕರಣ ನಡೆದಾಗ ನಾನೇ ಗೃಹ ಸಚಿವನಾಗಿದ್ದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ನನ್ನ ಫೋನ್ ಸೇರಿದಂತೆ ಸ್ವಾಮೀಜಿಗಳು ಹಾಗೂ ಸಿದ್ಧರಾಮಯ್ಯನವರ ಫೋನ್ ಕದ್ದಾಲಿಕೆ ಮಾಡಲಾಗಿತ್ತು. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದರಲ್ಲದೆ, ಆಗ ಕದ್ದಾಲಿಕೆ ಮಾಡಿದವರಿಗೆ ಇದೀಗ ದಿಢೀರ್ ಎಂದು ನಿರ್ಮಲಾನಂದ ಸ್ವಾಮಿಗಳ ಬಗ್ಗೆ ಪ್ರೀತಿ ಬಂದಿದೆ ಎಂದು ಟೀಕಿಸಿದರು.
ಬಿಎಸ್‌ವೈ ಬಳ್ಳಾರಿಗೆ ಬರ್ತಾರೆ:ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ದೊಡ್ಡ ಅಂತರದ ಗೆಲುವು ಸಾಧಿಸುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಯಡಿಯೂರಪ್ಪನವರ ಆದೇಶದಂತೆ ಬಳ್ಳಾರಿಗೆ ಬಂದಿದ್ದೇನೆ. ಲಿಂಗಾಯತ ಸಮುದಾಯದ ಮುಖಂಡರನ್ನು ಭೇಟಿ ಮಾಡಲಾಗುವುದು. ಯಡಿಯೂರಪ್ಪನವರು ಸಹ ಬಳ್ಳಾರಿಗೆ ಬರಲಿದ್ದಾರೆ ಎಂದರು. ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾಮಪತ್ರ ಪಡೆಯಲು ಇನ್ನು ಸಮಯವಿದೆ. ಹಿಂದಕ್ಕೆ ಪಡೆಯುವ ವಿಶ್ವಾಸವಿದೆ. ಕಾದು ನೋಡಿ ಎಂದರು.ಬಳ್ಳಾರಿ ಗೆಲುವಿನ ಕ್ಷೇತ್ರ:
ಪ್ರಧಾನಮಂತ್ರಿ ನರೇಂದ್ರ ಮೋದಿ 400 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದಾರೆ. ಅದರಲ್ಲಿ ಬಳ್ಳಾರಿ ಕ್ಷೇತ್ರವೂ ಒಂದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.ಈ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಬಿಎಸ್‌ವೈ ಶಕ್ತಿಯಿಂದ ಬಳ್ಳಾರಿ ಕೋಟೆ ಮೇಲೆ ಬಿಜೆಪಿ ಬಾವುಟ ಹಾರಲಿದೆ ಎಂದರು. ನಾನು ಮತ್ತು ಜನಾರ್ದನ ರೆಡ್ಡಿಯವರು ಒಂದಾಗಿರುವುದು ಕಾಂಗ್ರೆಸ್ ಗೆ ಭಯ ಕಾಡುತ್ತಿದೆ. ಇಡೀ ದೇಶದಲ್ಲಿ ಬಿಜೆಪಿ ಅಲೆಯಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದನ್ನು ಯಾರೂ ತಪ್ಪಿಸಲಾರರು ಎಂದರು.