ಸಾರಾಂಶ
ಮಿಲಾಗ್ರಿಸ್ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಶಿಬಿರವನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಇಲ್ಲಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಎನ್.ಎಸ್.ಎಸ್., ಯೂತ್ ರೆಡ್ ಕ್ರಾಸ್, ಎನ್.ಸಿ.ಸಿ., ರೋವರ್ಸ್ ಮತ್ತು ರೇಂಜರ್ಸ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಉಡುಪಿ ಚೇತನಾ, ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಮಂಗಳವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ನಡೆಸಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಶಿಬಿರವನ್ನು ಉದ್ಘಾಟಿಸಿ, ಕಳೆದ ಹಲವು ವರ್ಷಗಳಿಂದ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ವರ್ಷಕ್ಕೆ ಎರಡು ಬಾರಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
ನಾನು ಓರ್ವ ರಕ್ತದಾನಿಯಾಗಿ ಕಳೆದ ಹಲವು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದು, ರಕ್ತದಾನದಿಂದ ಸಿಗುವ ಸಂತೃಪ್ತಿ ಬೇರೆ ಕಾರ್ಯದಿಂದ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಎಂಸಿ ರಕ್ತನಿಧಿ ಕೇಂದ್ರದ ಡಾ.ದೀಪ್, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಅನುಪಮಾ ಜೋಗಿ, ಯೂತ್ ರೆಡ್ ಕ್ರಾಸ್ ಸಂಚಾಲಕಿ ಪ್ರೋ.ಕ್ಲಾರಾ ಮೇನೇಜಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.
ಶ್ರಾವ್ಯ ಅತಿಥಿಗಳನ್ನು ಸ್ವಾಗತಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೇಯ ವಂದಿಸಿದರು. ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ ೬೫ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.