ಅರಸೀಕೆರೆಯಲ್ಲಿ 2.65 ಲಕ್ಷ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ । ಅ.7ರಂದು ಅಂತಿಮ ಪಟ್ಟಿ ಪ್ರಕಟಣೆ
ಕನ್ನಡಪ್ರಭ ವಾರ್ತೆ ಅರಸೀಕೆರೆಮತದಾರರ ಪಟ್ಟಿಯನ್ನು ದೋಷರಹಿತ, ನಿಖರ ಹಾಗೂ ಆಧುನಿಕ ಮಾಹಿತಿಯೊಂದಿಗೆ ಪರಿಷ್ಕರಿಸುವ ಉದ್ದೇಶದಿಂದ ಚುನಾವಣಾ ಆಯೋಗವು ರಾಜ್ಯಾದ್ಯಂತ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ತಾಲೂಕಿನಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಹಸೀಲ್ದಾರ್ ಎಂ.ಜೆ. ಸಂತೋಷ್ ಕುಮಾರ್ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ಮೃತಪಟ್ಟ ಹಾಗೂ ವಲಸೆ ಹೋದ ಮತದಾರರ ಹೆಸರುಗಳ ತೆರವು, ವಿವರಗಳ ತಿದ್ದುಪಡಿ ಸೇರಿದಂತೆ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ ಎಂದರು.ಪರಿಷ್ಕರಣೆ ಪ್ರಕ್ರಿಯೆಯ ವೇಳಾಪಟ್ಟಿಯಂತೆ ಜುಲೈ 29ರಂದು ಮತಗಟ್ಟೆಗಳ ಪುನರ್‌ವಿಂಗಡಣೆ ಕಾರ್ಯ ಪೂರ್ಣಗೊಳ್ಳಲಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಪರಿಶೀಲನೆ ನಡೆಸಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.ತಾಲೂಕಿನ 325 ಮತಗಟ್ಟೆ ಕೇಂದ್ರಗಳಲ್ಲಿ ತಲಾ ಒಬ್ಬ ಬಿಎಲ್‌ಒ ಕಾರ್ಯನಿರ್ವಹಿಸಲಿದ್ದು, ಒಟ್ಟು 2,65,365 ಮತದಾರರು ಪರಿಷ್ಕರಣೆ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಈ ಕಾರ್ಯದಲ್ಲಿ ರಾಜಕೀಯ ಪಕ್ಷಗಳ ಸಹಕಾರವೂ ಅಗತ್ಯವಾಗಿದ್ದು, ಪ್ರತಿ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸುವಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ ಎಂದರು.ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸಬಾ ಹೋಬಳಿಯ 62 ಮತಗಟ್ಟೆಗಳಲ್ಲಿ 50,859 ಮತದಾರರು, ನಗರ ವ್ಯಾಪ್ತಿಯ 38 ಮತಗಟ್ಟೆಗಳಲ್ಲಿ 38,933 ಮತದಾರರು, ಬಾಣಾವರ ಹೋಬಳಿಯ 55 ಮತಗಟ್ಟೆಗಳಲ್ಲಿ 43,001 ಮತದಾರರು, ಗಂಡಸಿ ಹೋಬಳಿಯ 57 ಮತಗಟ್ಟೆಗಳಲ್ಲಿ 46,454 ಮತದಾರರು, ಕಣಕಟ್ಟೆ ಹೋಬಳಿಯ 55 ಮತಗಟ್ಟೆಗಳಲ್ಲಿ 42,659 ಮತದಾರರು ಹಾಗೂ ಜಾವಗಲ್ ಹೋಬಳಿಯ 58 ಮತಗಟ್ಟೆಗಳಲ್ಲಿ 43,419 ಮತದಾರರು ದಾಖಲಾಗಿದ್ದಾರೆ ಎಂದು ವಿವರಿಸಿದರು.ಮತದಾರರ ಮಾಹಿತಿಯ ನಿಖರತೆಗಾಗಿ 2025ರ ಮತದಾರರ ಪಟ್ಟಿಯನ್ನು 2002ರ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ಕಾರ್ಯ ಕೈಗೊಳ್ಳಲಾಗಿದ್ದು, ತಾಲೂಕು ಈಗಾಗಲೇ ಶೇ.95.57ರಷ್ಟು ಪ್ರಗತಿ ಸಾಧಿಸಿದೆ. ಉಳಿದಿರುವ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಮರಣ, ವಲಸೆ, ಗೈರು ಅಥವಾ ನಕಲು ಮತದಾರರನ್ನು ಪ್ರತ್ಯೇಕವಾಗಿ ಗುರುತಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.ಮತದಾರರಿಗೆ ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ವಯೋವೃದ್ಧರು, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತ ಮತದಾರರಿಗೆ ನೆರವಾಗಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದರು.ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಜೂನ್ 20ರಿಂದ 25ರವರೆಗೆ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಲಿದೆ. ಮನೆ ಮನೆ ಸಮೀಕ್ಷೆ, ಅರ್ಜಿ ವಿತರಣೆ ಹಾಗೂ ಮಾಹಿತಿ ಸಂಗ್ರಹಣೆ ಕುರಿತಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಸಹಕರಿಸುವಂತೆ ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ, ಚುನಾವಣಾ ವಿಭಾಗದ ಶಿರಸ್ತೇದಾರ್ ಹೇಮ, ಶಿವಶಂಕರ್, ನಾರಾಯಣ, ರಾಹುಲ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.