ಸಾರಾಂಶ
- ಬೇಸಿಗೆಯಲ್ಲಿ ಹಾಹಾಕಾರ ನೀಗುವ ಉದ್ದೇಶ: ನಿವೃತ್ತ ಎಂಜಿನಿಯರ್ ಮಲ್ಲಿಕಾರ್ಜುನ ಹೇಳಿಕೆ
- ಯಂತ್ರಗಳನ್ನು ಬಳಸದೇ ಕೇವಲ ಗುರುತ್ವಾಕರ್ಷಣ ಬಲದಿಂದಲೇ ನೀರು ಹರಿಸಲು ಅವಕಾಶ - - - ಕನ್ನಡಪ್ರಭ ವಾರ್ತೆ ಹರಿಹರದೇವರಬೆಳಕೆರೆ ಡ್ಯಾಂನಿಂದ ಹರಿಹರ ನಗರಕ್ಕೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರನ್ನು ವ್ಯವಸ್ಥೆ ಮಾಡುವುದು ಸೂಕ್ತವಾಗಿದೆ. ಈ ಹಿನ್ನೆಲೆ ನೀಲನಕ್ಷೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ನಿವೃತ್ತ ಎಂಜಿನಿಯರ್ ವಿ.ಎಸ್. ಮಲ್ಲಿಕಾರ್ಜುನ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಾವು ಸಿದ್ಧಪಡಿಸಿಕೊಂಡಿದ್ದ ನೀಲನಕ್ಷೆ ಬಿಡುಗಡೆಗೊಳಸಿ ಮಾತನಾಡಿದ ಅವರು, ನಗರದ ಪಕ್ಕದಲ್ಲಿಯೇ ತುಂಗಭದ್ರಾ ನದಿ ಹರಿಯುತ್ತಿದೆ. ಆದರೂ, ಬೇಸಿಗೆ ಸಂದರ್ಭ ಕುಡಿಯುವ ನೀರಿಗೆ ಹಾಹಾಕಾರವಿದೆ. ನದಿಯಿಂದ ಪಕ್ಕದ ಜಿಲ್ಲೆ ಹಾಗೂ ತಾಲೂಕುಗಳ ಕೆರೆ ತುಂಬಿಸಲು ೨೦ ರಿಂದ ೧೦೦ ಕಿಮೀ ದೂರದ ಗ್ರಾಮಗಳಿಗೆ ಸಾವಿರಾರು ಕೋಟಿ ರು. ಅನುದಾನ ವ್ಯಯ ಮಾಡಿ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಆ ಮೂಲಕ ಆ ಭಾಗದ ಜನರ ನೀರಿನ ಬವಣೆ ನೀಗಿಸುವ ಹಲವಾರು ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆ ಹರಿಹರ ನಗರಕ್ಕೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ನಗರದಿಂದ ಕೇವಲ ೧೪ ಕಿ.ಮೀ. ದೂರದ ದೇವರಬೆಳಕೆರೆ ಡ್ಯಾಂನಿಂದ ಕಡಿಮೆ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.ಈ ಡ್ಯಾಂನ ಜಲಾನಯನ ಪ್ರದೇಶವು ೨೨೮೬.೦೮ ಚದರ ಕಿ.ಮೀ. ಇದೆ. ಸರಾಸರಿ ಮಳೆ ೬೦೯ ಮಿ.ಮೀ. ಇದೆ. ಅಲ್ಲದೇ, ಶಾಗಲಿ ಹಳ್ಳ ಮತ್ತು ಶಾಂತಿಸಾಗರ ಹಳ್ಳಗಳನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಹರಿಹರ ನಗರದ ಕುಡಿಯುವ ನೀರಿನ ಪ್ರತಿ ದಿನದ ಬೇಡಿಕೆ ೧೫ ಎಂಎಲ್‌ಡಿ ಇದ್ದು, ೬೦ ದಿನಗಳಿಗೆ ೯೦೦ ಎಂಎಲ್‌ಡಿಯಂತೆ ೦.೦೩೧೭ ಟಿಎಂಸಿಗಳಾಗಿವೆ. ಬೇಸಿಗೆಯಲ್ಲಿ ನೀರಿನ ತೊಂದರೆಯಾದಾಗ 2 ದಿನಕ್ಕೊಮ್ಮೆ ನೀರು ಪೂರೈಸಿದಲ್ಲಿ ನೀರಿನ ಬೇಡಿಕೆ ೦.೦೧೫೯ ಟಿಎಂಸಿ ಆಗಿರುತ್ತದೆ. ಇದು ಡ್ಯಾಂನ ಶೇಕಡ ೦.೨೭೬ ಮಾತ್ರ ಆಗಿರುತ್ತದೆ ಎಂದು ವಿವರಿಸಿದರು.
ದೇವರಬೆಳಕೆರೆ ಡ್ಯಾಂನಿಂದ ಹರಿಹರ ನಗರಕ್ಕೆ ಯಾವುದೇ ಯಂತ್ರಗಳನ್ನು ಬಳಸದೇ ಕೇವಲ ಗುರುತ್ವಾಕರ್ಷಣ ಬಲದಿಂದಲೇ ನೀರನ್ನು ಹರಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಜನೆ ರೂಪಿಸಬೇಕು. ಸಂಘ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರರ ಮೇಲೆ ಒತ್ತಡ ತರಬೇಕು. ಆಗ ಮಾತ್ರ ಈ ಯೋಜನೆ ಕಾರ್ಯಗತವಾಗಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಲಭಿಸಿದಂತಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಿವೃತ್ತ ಎಂಜಿನಿಯರ್‌ಗಳಾದ ಚಂದ್ರಕಾಂತ್, ಚಂದ್ರಶೇಖರ್, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ, ಎನ್.ಮಲ್ಲಿಕಾರ್ಜುನ ಇದ್ದರು.
- - - ಬಾಕ್ಸ್ * ಕೆರೆ ನಿರ್ಮಾಣ ಅವಶ್ಯಕತೆ ಇಲ್ಲಮಳೆಗಾಲದಲ್ಲಿ ನೀರು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆಗಾಗಿ ಹೊಸದಾಗಿ ಕೆರೆಯನ್ನು ನಿರ್ಮಿಸಲು ಜಮೀನು ಖರೀದಿ ಮಾಡಬೇಕು. ಅದರ ಬದಲು ಸದರಿ ಡ್ಯಾಂ ಕಾಲುವೆಗಳು ಸಿಲ್ ಲೆವಲ್‌ಗಿಂತ ೫.೫೪ ಮೀಟರ್ ಕೆಳಭಾಗದಲ್ಲಿ ಇರುತ್ತೆ. ಇದರಿಂದ ಡ್ಯಾಂನಿಂದ ಕೇವಲ ಪೈಪ್‌ಲೈನ್ ಅಳವಡಿಸಿ ಗುರುತ್ವಾಕರ್ಷಣೆ ಶಕ್ತಿಯ ಸಹಾಯದಿಂದ ವಾಟರ್ ವರ್ಕ್ಸ್ ಏರಿಯೇಟರ್‌ಗೆ ನೀರು ಹರಿದುಬರುತ್ತದೆ. ಇದರಿಂದ ಯಾವುದೇ ಪಂಪ್‌ಹೌಸ್ ನಿರ್ಮಾಣ, ಯಂತ್ರೋಪಕರಣ, ವಿದ್ಯುತ್ ಕೇಂದ್ರ, ಜಮೀನು ಖರೀದಿ, ಕೆರೆ ನಿರ್ಮಾಣ ಅವಶ್ಯಕತೆ ಇಲ್ಲ.
- - - -೨೧ಎಚ್‌ಆರ್‌ಆರ್೪: ವಿ.ಎಸ್.ಮಲ್ಲಿಕಾರ್ಜುನ-೨೧ಎಚ್‌ಆರ್‌ಆರ್೪ಎ: ನಿವೃತ್ತ ಎಂಜಿನಿಯರ್ ವಿ.ಎಸ್. ಮಲ್ಲಿಕಾರ್ಜುನ ಸಿದ್ಧಪಡಿಸಿದ ನೀಲನಕ್ಷೆ.