ಸಾರಾಂಶ
ನೀರಿಗೆ ಬಿದ್ದವರಲ್ಲಿ ನಾಲ್ವರು ಕೂಡ ಈಜಿ ದಡ ಸೇರುವ ತವಕದಲ್ಲಿ ಈಜುತ್ತಾ ಬಂದರು.
ಭಟ್ಕಳ: ಮುರ್ಡೇಶ್ವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದೋಣಿ ಮಗುಚಿ ಓರ್ವ ಮೃತಪಟ್ಟರೆ, ಇನ್ನೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾದ ಘಟನೆ ಗುರುವಾರ ನಡೆದಿದೆ.
ಮಾದೇವ ನಾರಾಯಣ ಹರಿಕಾಂತ (೫೦) ಮೃತ ವ್ಯಕ್ತಿ. ವೆಂಕಟೇಶ ಅಣ್ಣಪ್ಪ ಹರಿಕಾಂತ (೨೬) ನಾಪತ್ತೆಯಾಗಿದ್ದಾನೆ. ಇನ್ನಿಬ್ಬರು ಈಜಿ ದಡ ಸೇರಿದ್ದಾರೆ.ಮುರ್ಡೇಶ್ವರದಿಂದ ಅಣ್ಣಪ್ಪ ವೆಂಕಟೇಶ ಹರಿಕಾಂತ ಅವರಿಗೆ ಸೇರಿದ ನವಗ್ರಹ ಹೆಸರಿನ ಗಿಲ್‌ನೆಟ್ ದೋಣಿಯಲ್ಲಿ ಗುರುವಾರ ಬೆಳಿಗ್ಗೆ ನಾಲ್ವರು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ ಮಗುಚಿ ಸಮುದ್ರ ಪಾಲಾಗಿದ್ದರು.
ನೀರಿಗೆ ಬಿದ್ದವರಲ್ಲಿ ನಾಲ್ವರು ಕೂಡ ಈಜಿ ದಡ ಸೇರುವ ತವಕದಲ್ಲಿ ಈಜುತ್ತಾ ಬಂದರು. ಇವರಲ್ಲಿ ವೆಂಕಟೇಶ ಅಲೆಯ ಹೊಡೆತಕ್ಕೆ ಸಿಲುಕಿ ಮೂವರಿಂದ ಬೇರಾಗಿ ನಾಪತ್ತೆಯಾಗಿದ್ದಾನೆ. ಮೂವರು ದಡ ಸೇರಿದ್ದರೂ ಮಾದೇವ ನೀರಿನಲ್ಲಿ ಮುಳುಗಿ ನೀರು ಕುಡಿದಿದ್ದರಿಂದ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇನ್ನಿಬ್ಬರಾದ ನಾಗೇಶ ನಾರಾಯಣ ಹರಿಕಾಂತ, ಆನಂದ ಅಣ್ಣಪ್ಪ ಹರಿಕಾಂತ ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ.ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರ್ಡೇಶ್ವರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ನಾಪತ್ತೆಯಾದ ವೆಂಕಟೇಶ ಅಣ್ಣಪ್ಪ ಹರಿಕಾಂತ