ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ಬೋಟ್ ಆಂಬುಲೆನ್ಸ್ ಅನ್ನು ಸೋಮವಾರ ಜಪ್ಪಿನಮೊಗೇರು ನದಿತಟದಲ್ಲಿ ಲೋಕಾರ್ಪಣೆ
ಉಳ್ಳಾಲ: ಬೋಟ್ ಆಂಬುಲೆನ್ಸ್ ನಂತಹ ಮಾದರಿ ಯೋಜನೆಯನ್ನು ಮೀನುಗಾರರು ರೂಪಿಸಿ ಕಾರ್ಯಗತಗೊಳಿಸಿರುವುದು ರಾಜ್ಯ ಸರ್ಕಾರಕ್ಕೆ ಪ್ರೇರಣೆಯಾಗಲಿದೆ. ಮೀನುಗಾರರ ಜೀವ ರಕ್ಷಣೆಯಲ್ಲಿ ಬೋಟ್ ಆಂಬುಲೆನ್ಸ್ ಸೇವೆ ಮಹತ್ವದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ಬೋಟ್ ಆಂಬುಲೆನ್ಸ್ ಅನ್ನು ಸೋಮವಾರ ಜಪ್ಪಿನಮೊಗೇರು ನದಿತಟದಲ್ಲಿ ಲೋಕಾರ್ಪಣೆಗೈದು ಮಾತನಾಡಿದರು. ಉಳ್ಳಾಲದ ಜನತೆ ಮತ್ತು ಮೀನುಗಾರರು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಮಾಡಬಲ್ಲರು ಎನ್ನುವುದಕ್ಕೆ ಬೋಟ್ ಆಂಬುಲೆನ್ಸ್ ಮತ್ತು ಕಾರ್ಯಕ್ರಮ ಸಾಕ್ಷಿಯಾಗಿದೆ, ಅಲ್ಲದೆ ಈ ಕಾರ್ಯಕ್ರಮ ಉಳ್ಳಾಲದ ಘನತೆಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದೆ ಎಂದು ತಿಳಿಸಿದರು. ವಿದಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ, ನೀರಿನ ಮೇಲೆ ಧ್ವಜಾರೋಹಣ ನಡೆಸಿರುವುದು ವಿನೂತನ ಹಾಗೂ ಐತಿಹಾಸಿಕ ಕಾರ್ಯಕ್ರಮ. ಸಮುದ್ರದಲ್ಲಿ ಅಪಾಯದಲ್ಲಿರುವವರ ರಕ್ಷಣಾ ಕಾರ್ಯ ದೇವರ ಕೆಲಸದಂತಿದ್ದು, ಈ ಸೇವೆಗೆ ಇನ್ನಷ್ಟು ಶಕ್ತಿ ಸಿಗಲಿ. ಮೀನುಗಾರರ ಆರ್ಥಿಕ ಬದುಕು ಭದ್ರವಾಗಲಿ. ದೇಶದಲ್ಲಿ ೩೫ ವರ್ಷಕ್ಕಿಂತ ಕೆಳಗಿನವರ ಪ್ರಮಾಣ ಶೇ.೬೫ರಷ್ಟಿದ್ದು, ಇದು ಭಾರತದ ಅಭಿವೃದ್ಧಿಗೆ ಆಶಾಕಿರಣ ಎಂದರು. ಸಾಲದಲ್ಲಿದ್ದೇವೆಯೋಜನೆ ರೂಪಿಸಿದ ಬಳಿಕ ಕಾರ್ಯಗತಗೊಳಿಸಲು ಆರ್ಥಿಕ ಸಮಸ್ಯೆಯಿಂದಾಗಿ ಮೂರು ವರ್ಷ ಬೇಕಾಯಿತು. ೧೬ ಲಕ್ಷ ಖರ್ಚು ತಗುಲಿದ್ದು ಆರು ಲಕ್ಷ ಸಾಲದಲ್ಲಿದ್ದೇವೆ. ನಮ್ಮ ಸಂಘದಲ್ಲಿ ಸಣ್ಣ ಮೀನುಗಾರರಿದ್ದು ಸಾಲ ಭರಿಸುವುದು ಸುಲಭವಲ್ಲ. ಉಳ್ಳಾಲದಲ್ಲಿರುವ ಉದ್ಯಮಿಗಳು, ಮೀನುಗಾರರು ಸಹಕಾರ ನೀಡಬೇಕು ಎಂದು ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಅಧ್ಯಕ್ಷತೆ ವಹಿಸಿದ್ದರು. ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ರೇವತಿ, ಜೆಡಿಎಸ್ ಮುಖಂಡ ಇಕ್ಬಾಲ್ ಮೂಲ್ಕಿ, ಸಂಘದ ವ್ಯವಸ್ಥಾಪಕ ಅಶ್ರಫ್ ಉಳ್ಳಾಲ್, ಅಬೂಬಕ್ಕರ್ ಸಿದ್ದೀಕ್, ಸಲಹೆಗಾರ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಫೀಕ್ ಕೋಡಿ, ನಿಝಾರ್, ಅಝ್ವೀಲ್, ಹನೀಫ್ ಕೋಟೆಪುರ, ಪೈಲಟ್‌ಗಳಾದ ಇಸ್ಮಾಯಿಲ್, ಜಮಾಲ್, ಇಕ್ಬಾಲ್, ಸಲೀಂ ಮೊದಲಾದವರು ಉಪಸ್ಥಿತರಿದ್ದರು.ಸಯ್ಯದ್ ಮದನಿ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರುನದಿ ಮಧ್ಯೆ ಗಣರಾಜ್ಯೋತ್ಸವಪ್ರಥಮ ಬಾರಿಗೆ ನಿರ್ಮಿಸಲಾದ ‘ಬೋಟ್ ಆಂಬ್ಯುಲೆನ್ಸ್’ ಮೀನುಗಾರರ ಪಾಲಿಗೆ ಅತ್ಯಂತ ಸ್ಮರಣೀಯಗೊಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನದಿತಟದಲ್ಲಿ ಬೋಟ್ ಆಂಬುಲೆನ್ಸ್’ ಲೋಕಾರ್ಪಣೆಗೊಳಿಸಿದ ಖಾದರ್, ವಿದಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಜೊತೆ ಅದೇ ಬೋಟ್‌ನಲ್ಲಿ ತೆರಳಿ ನದಿಮಧ್ಯೆ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸೈರನ್ ಮೊಳಗಿಸುತ್ತಾ ತೆರಳಿದ ಬೋಟ್‌ನಲ್ಲಿ ಖಾದರ್ ಗಣ್ಯರು ಒಂದು ಸುತ್ತು ಹೊಡೆದರು. ಖಾದರ್ ಬೇರೆ ಕಾರ್ಯಕ್ರಮಕ್ಕೆ ತೆರಳಿದರೆ ಇತರರು ಬೋಟ್‌ನಲ್ಲಿ ಉಳ್ಳಾಲಕ್ಕೆ ತೆರಳಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಕೇರಳ ಮೂಲದ ಯುವಕರ ಕೋಲಾಟ ನೃತ್ಯ ವಿಶೇಷ ಮನರಂಜನೆ ನೀಡಿತು.