ಪೊಲೀಸರು, ಬಾಂಬ್ ಸ್ಕ್ವ್ಯಾಡ್, ಶ್ವಾನ ದಳದಿಂದ ತಪಾಸಣೆಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬುಧವಾರ ಅಪರಿಚಿತರಿಂದ ‘ಬಾಂಬ್ ಬೆದರಿಕೆ’ಯ ಇ-ಮೇಲ್ ಬಂದಿದ್ದು, ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಇಡೀ ಆವರಣವನ್ನು ತಪಾಸಣೆಗೊಳಪಡಿಸಿದ್ದಾರೆ.ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ajmal.kasab@automicmail.io ಎಂಬ ಹೆಸರಿನಿಂದ ಬೆದರಿಕೆ ಸಂದೇಶ ರವಾನೆಯಾಗಿದೆ. ಈ ಮೇಲ್‌ನಲ್ಲಿ ತಮಿಳುನಾಡಿನ ಪ್ರಭಾವಿ ರಾಜಕೀಯ ಮುಖಂಡ ಉದಯನಿಧಿ ಸ್ಟಾಲಿನ್ ಅವರನ್ನು ಬೆಂಬಲಿಸುವ ಚೆನ್ನೈನ ಕೆಲವು ಪತ್ರಕರ್ತರ ಕುರಿತು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಕೆಲವು ಗಂಭೀರ ಆರೋಪಗಳನ್ನು ಪಟ್ಟಿಯಲ್ಲಿ ನೀಡಿರುವ ಕಿಡಿಗೇಡಿಗಳು, ಈ ವಿಚಾರವಾಗಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಬೆದರಿಕೆ ಸಂದೇಶದ ವಿಷಯ ತಿಳಿಯುತ್ತಿದ್ದಂತೆಯೇ ಕಾರವಾರ ಪೊಲೀಸರು ಅಲರ್ಟ್ ಆಗಿದ್ದು, ತಕ್ಷಣವೇ ಜಿಲ್ಲಾ ನ್ಯಾಯಾಲಯಕ್ಕೆ ಧಾವಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸರಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮತ್ತು ಶ್ವಾನ ದಳದವರು ನ್ಯಾಯಾಲಯದ ಪ್ರತಿಯೊಂದು ಕೊಠಡಿ, ಪಡಸಾಲೆ ಹಾಗೂ ಆವರಣದ ಮೂಲೆ ಮೂಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲವಾದರೂ, ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಸುಳ್ಳು ಇ-ಮೇಲ್ ಸೃಷ್ಟಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದವರು ಯಾರು? ಈ ಮೇಲ್ ಯಾವ ಐಪಿ ವಿಳಾಸದಿಂದ ಬಂದಿದೆ? ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ತನಿಖೆ ಆರಂಭಿಸಿದ್ದಾರೆ. ನ್ಯಾಯಾಲಯದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.