ಸಾರಾಂಶ
ಬೆಂಗಳೂರಿನಲ್ಲಿ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ವೀಕ್ ಲೀಡರ್‌ಶಿಪ್ ಕಾರಣವೆಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ಬೆಂಗಳೂರಿನಲ್ಲಿ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ವೀಕ್ ಲೀಡರ್‌ಶಿಪ್ ಕಾರಣವೆಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.ಧಾರವಾಡದಲ್ಲಿ ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಶಕ್ತ ನಾಯಕತ್ವದ ಕೊರತೆಯಿಂದ ರಾಜ್ಯದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ಏಕಕಾಲಕ್ಕೆ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಕರೆ ಬರುತ್ತದೆ ಎಂದರೆ ಏನು? ಜನರನ್ನು ಭಯದ ವಾತಾವರಣದಲ್ಲಿಟ್ಟು ಆಡಳಿತ ಮಾಡುವ ಹುನ್ನಾರ ಇದು. ಯಾವ ಕಾರಣಕ್ಕೂ ಅಂತಹ ದೇಶದ್ರೋಹಿಗಳನ್ನು ಬಿಡಬಾರದು. ಅಂಥವರನ್ನು ಮಟ್ಟ ಹಾಕಬೇಕು. ಇಷ್ಟೊತ್ತಿಗಾಗಲೇ ಅಪರಾಧಿಗಳನ್ನು ಬಂಧಿಸಿ ತರಬೇಕಿತ್ತು. ಆಡಳಿತದಲ್ಲಿ ಹಿಡಿತ ಇಲ್ಲ ಎಂಬ ಅನುಮಾನ ಬರುತ್ತಿದೆ ಎಂದರು.
ಪಂಚರಾಜ್ಯ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಕಾರಜೋಳ ಅವರು, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮಟ್ಟಿಗೆ ಬೆಳೆದಿಲ್ಲ. ಕಳೆದ ಸಲ ಎರಡು ಕ್ಷೇತ್ರದಲ್ಲಿದ್ದೆವು. ಈ ಸಲ ಐದಕ್ಕಿಂತ ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆ. ಆದರೆ, ನಮ್ಮ ಮತ ಬ್ಯಾಂಕ್ ಹೆಚ್ಚಳ ಆಗಿದೆ. ಇದು ಲೋಕಸಭೆಯಲ್ಲಿ ನಮಗೆ ಹೆಚ್ಚು ಅನುಕೂಲ ಆಗಲಿದೆ. ಕಾಂಗ್ರೆಸ್ ಕರ್ನಾಟಕದ ಮೋಸದಾಟವನ್ನೇ ತೆಲಂಗಾಣದಲ್ಲಿ ಮುಂದುವರಿಸಿದೆ. ಹೀಗಾಗಿ ನಾವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅಲ್ಲಿ ನಮ್ಮ ಪೈಪೋಟಿಯೂ ಇಲ್ಲ. ನಾವು ಮೂರನೇ ಸ್ಥಾನಕ್ಕೆ ಬರುತ್ತೇವೆ ಎಂದರು.ಇನ್ನು ಛತ್ತಿಸ್‌ಗಡ್‌ನಲ್ಲಿ ಪ್ರಬಲ ಪೈಪೋಟಿ ಇದೆ. ನಾವು ಅಧಿಕಾರಕ್ಕೆ ಬರುವ ಲಕ್ಷಣಗಳಿವೆ. ಪಂಚರಾಜ್ಯದ ಫಲಿತಾಂಶ ಲೋಕಸಭೆ ದಿಕ್ಸೂಚಿ ಎನ್ನಲಾಗದು ಎಂದರು.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಗ್ಗೆ ಯತ್ನಾಳ ಅಸಮಾಧಾನ ವಿಚಾರವಾಗಿ ಅದು ಮುಗಿದು ಹೋದ ಅಧ್ಯಾಯ. ಅದರ ಬಗ್ಗೆ ಮಾತನಾಡಲಾರೆ. ರಾಜ್ಯಾಧ್ಯಕ್ಷರನ್ನು ನಾವೆಲ್ಲ ಬೆಂಬಲಿಸಬೇಕು. ಬಿಜೆಪಿ ಅಧಿಕಾರಕ್ಕೆ ತರಲು ಮತ್ತೆ ಎಲ್ಲರೂ ಶ್ರಮಿಸೋಣ ಅಂತಷ್ಟೇ ಹೇಳುವೆ ಅಂದರು.