ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ಬರದ ಪರಿಸ್ಥಿತಿಯಲ್ಲಿ ಕೂಲಿಯೂ ದೊರೆಯುತ್ತಿಲ್ಲ, ಕೆಲಸವೂ ಇಲ್ಲದ ಸ್ಥಿತಿ ಇದ್ದು, ನರೇಗಾ ಯೋಜನೆ ಮೂಲಕ ಉದ್ಯೋಗ ಕಲ್ಪಿಸುವತ್ತ ಗಮನಹರಿಸಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಸಮಸ್ಯೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ನೀಡಲಾಗುತ್ತದೆ. ಗ್ರಾಮೀಣರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆ ಗಂಗೆ ಮೂಲಕ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಯಾವ್ಯಾವ ಗ್ರಾಮಗಳು ಯೋಜನೆಯಲ್ಲಿ ಕೈಬಿಟ್ಟು ಹೋಗಿದೆಯೋ ಅಂತಹ ಪ್ರದೇಶಗಳ ಪಟ್ಟಿ ಮಾಡಿಕೊಡಿ. ಜನರಿಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆ ಆಗಬಾರದು ಎಂದ ಅವರು, ಕೆಲವೆಡೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪಡವಗೋಡು ಗ್ರಾಪಂನ ಕೆಲವು ಗ್ರಾಮಗಳಲ್ಲಿ 3 ತಿಂಗಳಿನಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ತಕ್ಷಣ ಸರಿಪಡಿಸಿ ಎಂದು ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಉಪ ಕಾರ್ಯದರ್ಶಿ ಸುಜಾತ, ತಹಸೀಲ್ದಾರ್ ಚಂದ್ರಶೇಖರ್, ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್ ಇನ್ನಿತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.- - - ಬಾಕ್ಸ್ ಪತ್ರಕರ್ತರಿಗೆ ಧಮ್ಕಿ ಹಾಕಿದ ಸಚಿವ
ಸಾಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಸಮಸ್ಯೆ ಕುರಿತು ಸಭೆ ನಡೆಯಿತು. ಈ ವೇಳೆ ಪತ್ರಕರ್ತರು, ಸ್ಥಳೀಯ ಶಾಸಕರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿಲ್ಲವಲ್ಲ ಎಂದು ಪ್ರಶ್ನಿಸಿದರು. ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸಚಿವ ಮಧು ಬಂಗಾರಪ್ಪ, ಅದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದ ಘಟನೆ ನಡೆಯಿತು.ಮುಂದುವರಿದು ಮಾತನಾಡಿದ ಸಚಿವರು, ನಿಮ್ಮ ಬಳಿ ಬೇರೆ ಪ್ರಶ್ನೆ ಇಲ್ಲವೇ? ನೀವು ತಿಪ್ಪರಲಾಗ ಹಾಕಿದರೂ ಈ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಎಂದು ಧಮ್ಕಿ ರೀತಿಯಲ್ಲಿ ಪತ್ರಕರ್ತರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದು ಕಂಡುಬಂದಿತು.
ಇದರ ಜೊತೆಗೆ ವಾರ್ತಾಧಿಕಾರಿ ತಾರತಮ್ಯ ನೀತಿ ವಿರುದ್ಧ ಪತ್ರಕರ್ತರು ಸಚಿವರ ಗಮನಕ್ಕೆ ತಂದರು. ಆಗಲೂ ಗಂಭೀರವಾಗಿ ಪರಿಗಣಿಸದೇ, ಅವರ ಪರವಾಗಿಯೇ ಮಧು ಬಂಗಾರಪ್ಪ ಬ್ಯಾಟಿಂಗ್ ಮಾಡಿದರು. ಪತ್ರಕರ್ತರ ಜೊತೆ ಕೇವಲವಾಗಿ ನಡೆದುಕೊಂಡ ವಾರ್ತಾಧಿಕಾರಿ ಮಾರುತಿ ಅವರ ವರ್ತನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.