ಕಾರಿನಲ್ಲಿ ಸರ್ಕಾರಿ ಗುತ್ತಿಗೆ ವೈದ್ಯ ಮೃತದೇಹ ಪತ್ತೆ

| Published : Dec 02 2023, 12:45 AM IST

ಕಾರಿನಲ್ಲಿ ಸರ್ಕಾರಿ ಗುತ್ತಿಗೆ ವೈದ್ಯ ಮೃತದೇಹ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಸತೀಶ್‌ ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿಗೆ ಬೆಳಕಿಗೆ ಬಂದ ಭ್ರೂಣ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಸಹ ಕೇಳಿ ಬಂದಿತ್ತು. ಬಂಧಿತ ಆರೋಪಿಗಳು ವಿಚಾರಣೆ ವೇಳೆ ಸತೀಶ್ ಹೆಸರು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ತಲೆಮರೆಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪಿರಿಯಾಪಟ್ಟಣ ತಾಲೂಕು ಕೊಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಆಯುಷ್‌ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸತೀಶ್ (47) ಶುಕ್ರವಾರ ಕೊಡಗಿನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದ ಬಳಿ, ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾರಿನಲ್ಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.ಸತೀಶ್‌ ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿಗೆ ಬೆಳಕಿಗೆ ಬಂದ ಭ್ರೂಣ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಸಹ ಕೇಳಿ ಬಂದಿತ್ತು. ಬಂಧಿತ ಆರೋಪಿಗಳು ವಿಚಾರಣೆ ವೇಳೆ ಸತೀಶ್ ಹೆಸರು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ತಲೆಮರೆಸಿಕೊಂಡಿದ್ದರು.

KA 11 P 1379 ನಂಬರಿನ ಮಾರುತಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಖಾಸಗಿ ಕ್ಲಿನಿಕ್ ತೆರೆದಿದ್ದ ಸತೀಶ್ ಶುಕ್ರವಾರ ಬೆಳಗ್ಗೆ ಪಿರಿಯಾಪಟ್ಟಣದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಬಳಿಕ ಅಲ್ಲಿದ ಕೊಡಗಿನತ್ತ ಬಂದಿದ್ದರು ಎನ್ನಲಾಗಿದೆ. ಭ್ರೂಣ ಲಿಂಗಪತ್ತೆ ಪ್ರಕರಣ ಕಾವೇರಿದ್ದು, ಗುರುವಾರವಷ್ಟೇ ಆಲೆಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು. ಸಚಿವರ ಮುಂದೆಯೂ ವೈದ್ಯನ ವಿರುದ್ಧ ಸ್ಥಳೀಯರು ಆರೋಪಿಸಿದ್ದಾಗಿ ತಿಳಿದುಬಂದಿದೆ.ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದ ಹಿನ್ನೆಲೆ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೂಡಿದೆ.ಕಾರಿನಲ್ಲೇ ವಿಷ ಸೇವಿಸಿ, ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಶಾಲನಗರ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದು, ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಭೇಟಿ ನೀಡಿದ್ದಾರೆ.ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಡಾ. ಸತೀಶ್ ಪತ್ನಿ ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.