ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಗ್ರಂಥ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ, ಕವಿ ಅಪ್ಪಾಸಾಹೇಬ ಅಲಿಬಾದಿ ಅವರ ಪ್ರೆಮೊಲ್ಲಾಸ ಹಾಗೂ ಹೈಕು ಹಂದರ ಚುಟುಕು ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಯಿತು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಅಪ್ಪಾಸಾಹೇಬ ಅಲಿಬಾದಿ ಅವರು 26 ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯ, ಸಂಘಟನೆ, ಪ್ರಕಟಣೆ ಕ್ಷೇತ್ರಗಳಲ್ಲಿ ಕಳೆದ 40 ವರ್ಷಗಳಿಂದ ಅಪಾರವಾದ ಸೇವೆಯನ್ನು ಮಾಡಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರೇಮೋಲ್ಲಾಸ ಪ್ರಕಟಿಸುವ ಮೂಲಕ ಪ್ರೀತಿ ಪ್ರೇಮಕ್ಕೆ ವಯಸ್ಸಿನ ಮಿತಿಯಿಲ್ಲವೆಂದು ಸಾರಿದ್ದಾರೆ. ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಅಲಿಬಾದಿಯವರದು ಅನ್ಯೋನ್ಯ ದಾಂಪತ್ಯ ಎಂದರು. ದ.ರಾ.ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಸರಜು ಕಾಟ್ಕರ್ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೈ.ಬಿ.ಹಿಮ್ಮಡಿ ಅವರನ್ನು ಸನ್ಮಾನಿಸಲಾಯಿತು. ಚು.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕವಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಸಿ.ಕೆ.ಜೋರಾಪುರ ಸ್ವಾಗತಿಸಿದರು. ಬಸವರಾಜ ಗಾರ್ಗಿ ವಂದಿಸಿದರು. ಬಸವರಾಜ ರೊಟ್ಟಿ ಮುಂತಾದವರು ಇದ್ದರು. ಚುಟುಕು ಸಂಭ್ರಮ ಸ್ಮರಣ ಸಂಚಿಕೆ
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿಗೆ 25 ವರ್ಷಗಳಾದ ನಿಮಿತ್ತ 2025 ಮಾ.1 ಮತ್ತು 3 ರಂದು ರಜತ ಮಹೋತ್ಸವ ಮತ್ತು 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಆಚರಿಸಲಾಯಿತು. ಆ ಎರಡು ದಿವಸಗಳ ಉತ್ಸವದ ವರ್ಣಚಿತ್ರಗಳನ್ನು ಮತ್ತು ಜನರ ಪ್ರತಿಕ್ರಿಯೆಯನ್ನು ದಾಖಲಿಸುವ ಉದ್ದೇಶದಿಂದ ಚುಟುಕು ಸಂಭ್ರಮ ಎಂಬ ಸ್ಮರಣ ಸಂಚಿಕೆ ಹೊರತರಲಾಗಿದೆ. 208 ಪುಟಗಳ ಈ ಸಂಚಿಕೆಯಲ್ಲಿ ನಮ್ಮ ಸಂಸ್ಥೆ ಕಾಲು ಶತಮಾನ ಕಾಲ ನಡೆದು ಬಂದ ದಾರಿಯ ಹೆಜ್ಜೆ ಗುರುತುಗಳನ್ನು ಸಹ ಸಚಿತ್ರವಾಗಿ ದಾಖಲಿಸಲಾಗಿದೆ. ಕಳೆದ 27 ವರ್ಷಗಳಲ್ಲಿ ನಾವು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆಸಿದ ಕಾರ್ಯಕ್ರಮಗಳ ಮತ್ತು ರಾಜ್ಯ, ಜಿಲ್ಲಾ ಸಮ್ಮೇಳನಗಳ ನೂರಕ್ಕೂ ಹೆಚ್ಚು ಫೋಟೋಗಳನ್ನು ಅಳವಡಿಸಲಾಗಿದೆ. ಸಾಹಿತಿಗಳಾದ ಬಿ.ಎಸ್.ಗವಿಮಠ, ಡಾ.ಜಗಜಂಪಿ, ಡಾ.ಮರಾಠೆ, ಪ್ರದೀಪಕುಮಾರ ಹೆಬ್ರಿ ಮೊದಲಾದ ಹಿರಿಯರು ಬರೆದ ಲೇಖನಗಳಿವೆ. ಅಲ್ಲದೆ ನಾಡಿನ ಪ್ರಸಿದ್ಧ ಚುಟುಕು ಕವಿಗಳು ಚುಟುಕು ಸಾಹಿತ್ಯದ ಕುರಿತು ತಮ್ಮದೇ ಚುಟುಕುಗಳ ಸಹಿತ ಬರೆದ ನನ್ನ ದೃಷ್ಟಿ, ನನ್ನ ಸೃಷ್ಟಿ ಎಂಬ ಒಂದು ವಿಶೇಷ ಲೇಖನಮಾಲೆಯಿದೆ. ಚುಟುಕು ಸಾಹಿತ್ಯದ ಕುರಿತು ಅರಿತುಕೊಳ್ಳಲು ಇದೊಂದು ಸಂಗ್ರಹಣಿಯ ಅಪೂರ್ವ ಕೈಪಿಡಿಯಾಗಿದೆ. ಸುಮಾರು 30 ಪುಟಗಳಷ್ಟು ಬೆಳ್ಳಿಹಬ್ಬ ಸಮ್ಮೇಳನಗಳ ವರ್ಣಚಿತ್ರಗಳಿವೆ. ಎಲ್ಲ ನಮ್ಮ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಭಾವಚಿತ್ರಗಳೂ ಇವೆ.