ಕನ್ನಡಪ್ರಭ ವಾರ್ತೆ ನಂಜನಗೂಡು
ಯಾವುದನ್ನೂ ಹೆಚ್ಚು ಅಂಟಿಸಿಕೊಳ್ಳದೇ ಮನುಷ್ಯ ಇರುವಷ್ಟು ದಿನ ಆನಂದದಿಂದ ಜೀವನ ಸಾಗಿಸಲು ಬೇಕಾದ ಮೌಲಿಕ ಮಾತುಗಳು ವಚನ ವೈಭವ ಹಾಗೂ ಯೋಗ ಜೀವನ ಕೃತಿಯಲ್ಲಿ ಅಡಕವಾಗಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಹೌಸಿಂಗ್ ಬೋರ್ಡ್ ಕಾಲೋನಿಯ ಯೋಗ ಮಹಾಮನೆಯಲ್ಲಿ ನಡೆದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ 18ನೇ ವಾರ್ಷಿಕೋತ್ಸವ ಅಂಗವಾಗಿ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ಅವರು ಬರೆದಿರುವವಚನ ವೈಭವ ಹಾಗೂ ಯೋಗಜೀವನ ಭಾಗ- 2 ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಳೆದ ವರ್ಷ ಬಿಡುಗಡೆಯಾಗಿದ್ದ ಪ್ರಕಾಶ್ ಅವರ ಯೋಗ ಜೀವನಕೃತಿಯ ಮುಂದುವರೆದ ಭಾಗವಾಗಿ ಮತ್ತೊಂದು ಸಂಪುಟ ಹೊರಬಂದಿದೆ. ಜತೆಗೆ ಶರಣರ ವಚನ ಸಾಹಿತ್ಯ ಕುರಿತ ಆನುಭಾವವನ್ನು ಕಟ್ಟಿಕೊಡುವ ವಚನ ವೈಭವ ಕೃತಿಯು ಕೂಡ ಅತ್ಯಂತ ಮೌಲಿಕವಾಗಿ ಮೂಡಿಬಂದಿದೆ. ಮನಸ್ಸನ್ನು ಉತ್ತಮ ಭಾವನೆಗಳಲ್ಲಿ ಲೀನವಾದರೆ ಸಂತೋಷ ತಾನಾಗಿಯೇ ಮನೆ ಮಾಡುತ್ತದೆ ಎಂದರು.ಉತ್ತಮ ವ್ಯಕ್ತಿಯಾಗಿ ಈ ಕೃತಿಗಳು ಸಹಕಾರಿಯಾಗಲಿವೆ. ವಚನಗಳ ಬಗ್ಗೆ ಪ್ರಕಾಶ್ ಅವರ ತಮ್ಮದೇ ಆದ ಆನುಭಾವ ಹಾಗೂ ದೃಷ್ಟಾಂತಗಳ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮಾಡಿರುವುದು ಸಾಮಾನ್ಯರನ್ನೂ ಮುಟ್ಟುವಂತಿದೆ ಎಂದು ಅವರು ಹೇಳಿದರು.
ಓದು ಕೂಡ ಸಂಜೀವಿನಿ ಇದ್ದಂತೆ. ಚೈತನ್ಯ ನೀಡುವ ಶಕ್ತಿ ಹಾಗೂ ಸಕಾರಾತ್ಮಕ ಆಲೋಚನೆಗೆ ದಾರಿ ಮಾಡಿಕೊಡುವ ಶಕ್ತಿ ಓದಿಗಿದೆ. ಸಂತರು ತಮ್ಮ ಜ್ಞಾನದ ಬಲದಿಂದ ಏನೂ ಇಲ್ಲದಿದ್ದರೂ ಸಂತೋಷವಾಗಿರುತ್ತಿದ್ದರು. ಯಾವುದನ್ನೂ ಹೆಚ್ಚು ಅಂಟಿಸಿಕೊಳ್ಳದೇ, ಮನಸ್ಸಿನ ಬೇಡವಾದನ್ನು ಹೊರ ಹಾಕಿ ಪರಿಪೂರ್ಣತೆಯೆಡೆಗೆ ಸಾಗಲು ಈ ಕೃತಿಗಳು ಪ್ರತಿಯೊಬ್ಬರನ್ನೂ ಓದುವಂತೆ ಪ್ರೇರೇಪಿಸುತ್ತವೆ ಎಂದರು.
ಶರಣ ತತ್ವ ಚಿಂತಕ ಶಂಕರ್ ದೇವನೂರು ಮಾತನಾಡಿ, ಮನಸ್ಸನ್ನು ಬಯಕೆಗಳಿಂದ ಶೂನ್ಯಗೊಳಿಸುವುದು ಮತ್ತು ದೈವಿಕತೆಯೆಡೆಗೆ ಸಾಗುವುದೇ ಯೋಗ. ಜ್ಯೋತಿ ಶರಣ ಸಂಸ್ಕೃತಿಯ ಪ್ರತೀಕ. 12ನೇ ಶತಮಾನದ ಶರಣರು ಅಂತಃಕರಣ, ಕಾರುಣ್ಯ, ಮೈತ್ರಿಯಿಂದ ಪೂರ್ಣ ವಿಕಾಸಕ್ಕೆ ಕಾರಣ ಕಂಡುಕೊಂಡವರು. ಮಾತಿಲ್ಲದವರಿಗೆ ಮಾತಾದರು. ಬಹಿರ್ಮುಖ, ಅಂತರ್ಮುಖ ಸ್ವಚ್ಛತೆಗೆ ಒತ್ತು ಕೊಟ್ಟರು, ಸಾಮಾನ್ಯರು ಕಟ್ಟಿದ ಬಸವ ಧರ್ಮ ಒಳಗೊಂಡು ಬದುಕುವುದೇ ಜೀವನ ಎಂದು ಸಾರಿದ್ದಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ವಚನ ವೈಭವ ಹಾಗೂ ಯೋಗ ಜೀವನ ಕೃತಿಗಳು ಸಂತೃಪ್ತಿ, ಸಂಪತ್ತು, ವೈಭವವನ್ನು ತಂದುಕೊಡಲಿವೆ ಎಂಬ ವಿಶ್ವಾಸವಿದೆ ಎಂದರು.
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಪರಂಪರೆಯ ಬೇರು ಮರೆಯಬಾರದು. ಶರಣತತ್ವವು ವೈಜ್ಞಾನಿಕ ತಳಹದಿಯಲ್ಲೇ ಇವೆ ಎಂಬುದನ್ನು ಮರೆಯಬಾರದು. ಭವಿಷ್ಯದ ಮಕ್ಕಳಿಗೆ ವಚನ ದರ್ಶನ ಮಾಡಿಸಬೇಕು. ಪರಂಪರೆ ಅರಿಯದ ಮಕ್ಕಳು ತಾಯಿಯಿಂದ ಪರಿತ್ಯಕ್ತವಾದ ಮಕ್ಕಳ ಸ್ಥಿತಿಯಂತಾಗಲಿದೆ. ಬೆಳಕಾಗಿ ನಿಲ್ಲುವುದು ಭಗವಂತ ಮನುಷ್ಯನಿಗೆ ಕೊಟ್ಟ ವರ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಮುಳ್ಳೂರು ರಾಜು ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಜಿ. ಉಡಿಗಾಲ ಅವರು ಪ್ರಣವಧ್ಯಾನದ ಮೂಲಕ ನೆರೆದಿದ್ದ ನೂರಾರು ಯೋಗಬಂಧುಗಳನ್ನು ಮಂತ್ರ ಮುಗ್ಧಗೊಳಿಸಿದರು.ನವಿಲೂರು ಚುಂಚನಹಳ್ಳಿ ಮಠಾಧ್ಯಕ್ಷ ಚೆನ್ನಬಸವ ಸ್ವಾಮೀಜಿ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ, ಕಾರ್ಯದರ್ಶಿ ಎನ್.ಆರ್. ಗಣೇಶಮೂರ್ತಿ, ನಂಜನಗೂಡು ಯೋಗ ಫೌಂಡೇಶನ್ ಗೌರವಾಧ್ಯಕ್ಷ ಎಚ್.ಎಸ್. ರಾಜು, ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್ ಇದ್ದರು.