ಪುಸ್ತಕ ಬರೆಯುವವರು ಮಾತ್ರ ಸಾಹಿತಿಗಳಲ್ಲ: ರಾಮಕೃಷ್ಣ ಭಟ್ಟ ಧುಂಡಿ

| Published : Dec 24 2024, 12:47 AM IST

ಪುಸ್ತಕ ಬರೆಯುವವರು ಮಾತ್ರ ಸಾಹಿತಿಗಳಲ್ಲ: ರಾಮಕೃಷ್ಣ ಭಟ್ಟ ಧುಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪುಸ್ತಕ ಬರೆಯುವವರು ಮಾತ್ರ ಸಾಹಿತಿಗಳೆಂಬ ಭಾವನೆ ಸರಿಯಲ್ಲ. ಯಕ್ಷಗಾನ, ನಾಟಕದಂಥ ಕಲೆಯ ಕಲಾವಿದರೂ ಸಾಹಿತಿಗಳೇ ಆಗಿದ್ದಾರೆ.

ಯಲ್ಲಾಪುರ: ಸಮಾಜದಲ್ಲಿ ಆಧುನಿಕತೆಯ ಬಿರುಗಾಳಿ ಪ್ರಾರಂಭವಾಗಿದೆ. ಶಿಕ್ಷಣ, ಜೀವನಕ್ರಮ ನಮ್ಮೆಲ್ಲ ಚಿಂತನೆಯನ್ನೇ ಬದಲಾಯಿಸಿದೆ. ನಾವು ಸಂತೋಷದಲ್ಲಿರುವಂತೆ ತೋರಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡ ಬಂದ ಸಾಂಸ್ಕೃತಿಕ ಬದುಕಿನ ಅವಿಚ್ಛಿನ್ನ ಪರಂಪರೆಯೊಂದು ಕಡಿದು ಬೀಳಬಹುದಾದ ಅವ್ಯಕ್ತ ಭಯ ನಮ್ಮನ್ನು ಕಾಡಲಾರಂಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷ ರಾಮಕೃಷ್ಣ ಭಟ್ಟ ಧುಂಡಿ ಆತಂಕ ವ್ಯಕ್ತಪಡಿಸಿದರು.

ಸೋಮವಾರ ತಾಲೂಕಿನ ಮಂಚಿಕೇರಿಯ ರಾ.ರಾ. ಸಭಾಭವನದಲ್ಲಿ ೬ನೇ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು.ಪುಸ್ತಕ ಬರೆಯುವವರು ಮಾತ್ರ ಸಾಹಿತಿಗಳೆಂಬ ಭಾವನೆ ಸರಿಯಲ್ಲ. ಯಕ್ಷಗಾನ, ನಾಟಕದಂಥ ಕಲೆಯ ಕಲಾವಿದರೂ ಸಾಹಿತಿಗಳೇ ಆಗಿದ್ದಾರೆ. ಕನ್ನಡದ ಬೆಳವಣಿಗೆಯಲ್ಲಿ ವಾದ, ಪ್ರತಿವಾದಗಳು ಇರುವುದು ಸಹಜ. ವಿಭಿನ್ನ ಬಗೆಯ ಸಾಹಿತ್ಯ ಸಮ್ಮೇಳನ ನಡೆಯಬೇಕು. ಕನ್ನಡ ಕೇವಲ ಭಾಷೆಯಲ್ಲ. ನಮ್ಮೆಲ್ಲರ ಬದುಕಿನ ಪದ್ಧತಿ, ಋಷಿ ಸಮೂಹ ನೀಡಿದ ಅನುಭವದ ಸಾರ ಎಂದರು.

ಇಂದು ಹಳ್ಳಿಗಳು ಬರಿದಾಗುತ್ತಿವೆ. ವೃದ್ಧ ತಂದೆ- ತಾಯಿಗಳನ್ನು ತೊರೆದು, ದೇಶ- ವಿದೇಶಗಳಿಗೆ ಯುವಜನಾಂಗ ಬದುಕಿಗಾಗಿ ಹೋಗುತ್ತಿರುವುದು ಆತಂಕ ನಮ್ಮನ್ನು ಕಾಡುತ್ತಿದೆ. ತಾಲೂಕಿನಲ್ಲಿ ಕೆಲವೇ ಕೆಲವು ಆಂಗ್ಲ ಶಾಲೆಗಳಿವೆ. ಉಳಿದೆಲ್ಲವೂ ಕನ್ನಡ ಮಾಧ್ಯಮದಲ್ಲೇ ಇರುವುದು ಸಮಾಧಾನ ಎಂದರು.

ಅರಣ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಸದಾ ಸಂಘರ್ಷಗಳು ನಡೆಯುತ್ತಲೇ ಇರುತ್ತದೆ. ಸಣ್ಣಪುಟ್ಟ ಬೇಡಿಕೆಗಳನ್ನು ಇಲಾಖೆ ಈಡೇರಿಸಬೇಕು. ನಮ್ಮ ನೆಲದಲ್ಲಿರುವ ಬುಡಕಟ್ಟು ಸಿದ್ದಿ, ಕುಣಬಿ ಸಮುದಾಯದವರನ್ನು ಮುಖ್ಯವಾಹಿನಿಗೆ ತಂದು, ಅವರ ಹಿರಿಮೆ, ಕ್ರಿಯಾಶೀಲತೆ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೇವೆ ಎಂದರು.

ಸ್ವರ್ಣವಲ್ಲೀ ಶ್ರೀಗಳು, ಡಾ. ಶಿವರಾಮ ಕಾರಂತರ ಮುಂದಾಳತ್ವದಲ್ಲಿ ಬೇಡ್ತಿ, ಕೈಗಾ ಯೋಜನೆ ಹೋರಾಟ ನಡೆಸಿದ್ದು ಇತಿಹಾಸ. ಇಲ್ಲಿನ ಯುವಕರಿಗೆ ಉದ್ಯೋಗಕ್ಕೆ ಉದ್ಯಮವಿಲ್ಲ. ಆದರೆ ನಮ್ಮ ಶಾಸಕರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಪೋರೇಟ್ ವ್ಯವಸ್ಥೆಯ ಆರೋಗ್ಯ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಅಭಿವೃದ್ಧಿ ಸರಿಯಾಗಿ ಆಗಬೇಕಾದರೆ ಜನಪರ ಕಾಳಜಿಯುಳ್ಳ ರಾಜಕಾರಣಿಗಳು, ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ, ವಿಮರ್ಶಕ ಶ್ಯಾಮಸುಂದರ ಬಿದ್ರಕುಂದಿ ಮಾತನಾಡಿ, ಪಂಪ, ದಿನಕರ ದೇಸಾಯಿ, ಯಶವಂತ ಚಿತ್ತಾಲ ಸೇರಿದಂತೆ ಅನೇಕ ಹಿರಿಯ ಕವಿಗಳ ಭೂಮಿ ಇದು. ಭಾರತ ಸಣ್ಣ ಕಥೆಗಳ ಕಣಜ ಎಂದ ಅವರು, ಸಮ್ಮೇಳನದಲ್ಲಿ ೪ ರೀತಿಯ ಪ್ರೇಕ್ಷಕರಿರುತ್ತಾರೆ. ಕನ್ನಡದ ಬಗ್ಗೆ ಪ್ರೀತಿ ಇರುವವರು, ಸಾಹಿತ್ಯ ಓದಿ ಅಧ್ಯಯನ ಮಾಡುವವರು, ಆರ್ಥಿಕ ನೆರವು ನೀಡುವ ಶಾಸಕರಾದ ಹೆಬ್ಬಾರರಂತಹ ವ್ಯಕ್ತಿಗಳು, ಇನ್ನೊಂದು, ಸಾಹಿತ್ಯವನ್ನು ವಿಶಿಷ್ಟವಾಗಿ ಓದಿ ತಿಳಿದು, ವಿಮರ್ಶಿಸುವವರು. ಹೀಗೆ ವಿಭಿನ್ನ ನೆಲೆಯಲ್ಲಿ ಗುರುತಿಸಬಹುದು ಎಂದರು.

ವನರಾಗ ಶರ್ಮರ ಮರಳಿ ಮಿನುಗಿತು ಕಾಮನಬಿಲ್ಲು ಕಥಾಸಂಕಲನ ಲೋಕಾರ್ಪಣೆ ಮಾಡಿದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಈ ಪ್ರದೇಶ ಶಿಕ್ಷಣ, ಸಾಹಿತ್ಯ, ಸಂಗೀತ, ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ಪ್ರೇಕ್ಷಕರ ಸಂಖ್ಯೆಯೂ ಸದಾ ಇರುತ್ತದೆ. ಕನ್ನಡದ ನೆಲ, ಜಲ, ಭಾಷೆಯನ್ನು ಅನನ್ಯವಾಗಿ ಪ್ರೀತಿಸಬೇಕು ಎಂದರು.ದಿ. ಶಂಕರ ಫಾಯ್ದೆ ದ್ವಾರವನ್ನು ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯದಲ್ಲೇ ಸಿದ್ದಾಪುರದಲ್ಲಿ ಭುವನೇಶ್ವರಿ ದೇವಾಲಯವಿದೆ. ಎಷ್ಟೇ ಸಾಹಿತ್ಯ ಬರೆದರೂ ಸಾಹಿತ್ಯವನ್ನು ಕಲಾವಿದ ಮಾತ್ರ ರಸಭಾವದಿಂದ ಜೀವ ತುಂಬಬಲ್ಲ ಎಂದರು.ಕಥಾ ಸಂಕಲನದ ಕುರಿತು ಶ್ರೀರಂಗ ಕಟ್ಟಿ ಮಾತನಾಡಿದರು. ರಾಷ್ಟ್ರಧ್ವಜಾರೋಹಣ ಮಾಡಿದ ತಹಸೀಲ್ದಾರ್ ಯಲ್ಲಪ್ಪ ಗೊನೆಣ್ಣನವರ, ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ, ನಿಕಟಪೂರ್ವ ಅಧ್ಯಕ್ಷ ಟಿ.ವಿ. ಕೋಮಾರ, ಪುಸ್ತಕ ಕರ್ತೃ ವನರಾಗ ಶರ್ಮ, ಸುಬ್ರಾಯ ಭಟ್ಟ ಬಕ್ಕಳ, ಸಂತೋಷ ಫಾಯ್ದೆ ಮಾತನಾಡಿದರು. ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿದ್ದ ಆರ್.ಡಿ. ಹೆಗಡೆ ಆಲ್ಮನೆ, ಪಂ. ಗಣಪತಿ ಭಟ್ಟ ಹಾಸಣಗಿ, ರಾ.ರಾ. ಅಧ್ಯಕ್ಷ ಗುರುಪ್ರಸಾದ ಭಟ್ಟ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಗ್ರಾಪಂ ಅಧ್ಯಕ್ಷರಾದ ರೇಣುಕಾ ಭೋವಿವಡ್ಡರ್, ವಿನೋದಾ ಪೂಜಾರಿ, ಬೀರಣ್ಣ ನಾಯಕ ಮೊಗಟಾ, ಸಂಜೀವಕುಮಾರ ಹೊಸ್ಕೇರಿ, ಜಾರ್ಜ್ ಫರ್ನಾಂಡೀಸ್, ಮುರ್ತುಜಾ ಹುಸೇನ್, ಬಸವರಾಜ ಬೋಚಳ್ಳಿ ಮುಂತಾದವರು ಉಪಸ್ಥಿತರಿದ್ದರು. ರಾ.ರಾ. ವಿದ್ಯಾರ್ಥಿಗಳಿಂದ ನಾಡಗೀತೆ ಪ್ರಾರ್ಥನೆ. ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಜಿ.ಎನ್. ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಭಟ್ಟ ವಂದಿಸಿದರು.