ಜೀವನದಲ್ಲಿ ಗುರಿ ಸಾಧಿಸಲು ಪುಸ್ತಕಗಳ ಪಾತ್ರ ಮುಖ್ಯ

| Published : Aug 30 2024, 02:01 AM IST

ಸಾರಾಂಶ

ದಾವಣಗೆರೆಯಲ್ಲಿ ವಕೀಲ ಕೆ. ದಾದಾಪೀರ್ ಬರೆದಿರುವ ಲಾಯರ್ಸ್‌ ರೆಡಿ ರೆಕನರ್ ಪುಸ್ತಕವನ್ನು ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜೀವನದಲ್ಲಿ ಕಲಿಕೆ ನಿರಂತರವಾದ ಪ್ರಕ್ರಿಯೆ. ಅಂತಹ ಕಲಿಕೆಯಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

ಗುರುವಾರ ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ವಕೀಲ ಕೆ.ದಾದಾಪೀರ್ ಬರೆದಿರುವ ಲಾಯರ್ಸ್‌ ರೆಡಿ ರೆಕನರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಗುರಿ ಸಾಧಿಸಲು ಪುಸ್ತಕಗಳು ಸರಿ ಹಾದಿಯಲ್ಲಿ ನಡೆಸುವುದರಿಂದ ಅಪಾರ ಪ್ರಾಮುಖ್ಯತೆ ಇದೆ ಎಂದರು.

ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯದ್ದಾಗಿದೆ. ಪುಸ್ತಕಗಳ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತೇವೆ ಹಾಗೂ ಲೋಕದ ಮಾಹಿತಿಯ ಪಡೆಯಲು ಅವಕಾಶವಾಗುತ್ತದೆ. ಪ್ರಪಂಚದ ಬಗ್ಗೆ ಹೊಸ ಮಾಹಿತಿ, ನೆಲದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳು ಸಹಾಯ ಮಾಡುತ್ತವೆ ಮತ್ತು ಜ್ಞಾನವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮತ್ತು ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ, ಪೈಪೋಟಿಯ ಜಗತ್ತಿನಲ್ಲಿ ನ್ಯಾಯವಾದಿ ವಕೀಲ ಕೆ.ದಾದಾಪೀರ್ ಅವರು ಶ್ರಮವಹಿಸಿ ಬರೆದಿರುವ ಲಾಯರ್ಸ್‌ ರೆಡಿ ರೆಕನರ್ ಪುಸ್ತಕವನ್ನು ಬಿಡುಗಡೆ ಮಾಡುವುದು ನಿಜಕ್ಕೂ ಹೆಮ್ಮೆ ಹಾಗೂ ಸಂತಸದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಹಿರಿಯ ನ್ಯಾಯವಾದಿ, ಲೇಖಕ ಕೆ.ದಾದಾಪೀರ್ ಮಾತನಾಡಿ, ಮೊಬಲ್‌ನಲ್ಲಿ ಗೂಗಲ್ ವೀಕ್ಷಣೆ ಬದಿಗಿಟ್ಟು, ಪುಸ್ತಕ ಓದುವ ಆನಂದ ಅನುಭವಿಸಿ, ಜ್ಞಾನಸಂಪನ್ನರಾಗಬೇಕು. ಆಳವಾದ ಅಧ್ಯಯನದಿಂದ ವಾಸ್ತವಾಂಶಗಳನ್ನು ಸರಿಯಾಗಿ ಮತ್ತು ಸುಲಲಿತವಾಗಿ ನ್ಯಾಯಾಲಯದಲ್ಲಿ ಮಂಡಿಸಿ, ಮನದಟ್ಟು ಮಾಡಲು ಕಾನೂನು ಪುಸ್ತಕಗಳ ಅಭ್ಯಾಸ ನಿರಂತರವಾಗಿರಬೇಕು ಎಂದು ಸಲಹೆ ನೀಡಿದ ಅವರು, ತಮ್ಮ ಲಾಯರ್ಸ್‌ ರೆಡಿ ರೆಕನರ್ ಪುಸ್ತಕದಲ್ಲಿ 20 ಕೇಂದ್ರದ ಅಧಿನಿಯಮಗಳು ಹಾಗೂ ಕರ್ನಾಟಕದ ಅಧಿನಿಯಮಗಳ ಪರಿಚಯವಿದ್ದು, 222 ಪುಟಗಳ ಪುಸ್ತಕವನ್ನು ಬೆಂಗಳೂರಿನ ಪ್ರೀಮಿಯರ್ ಬುಕ್ ಹೌಸ್ ಪ್ರಕಟಿಸಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಪುಸ್ತಕಗಳು ನಮ್ಮನ್ನು ಒಂಟಿತನದ ಪ್ರಪಂಚದಿಂದ ಹೊರತರುವ ಅತ್ಯುತ್ತಮ ಒಡನಾಡಿಗಳಾಗಿವೆ. ಪುಸ್ತಕ ರಚನೆ ಒಂದು ರಚನಾತ್ಮಕ ಕ್ರಿಯೆ, ಒಂದು ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಜೀವನ ಮೌಲ್ಯವನ್ನು ತಿಳಿಯಲು ಪುಸ್ತಕಗಳು ಸಹಕಾರಿಯಾಗಿವೆ. ಪುಸ್ತಕಗಳಿಗೂ, ವಕೀಲರಿಗೂ ಅವಿನಾಭಾವ ಸಂಬಂಧದ ಅವಿಭಾಜ್ಯ ಅಂಗಗಳಾಗಿವೆ ಎಂದರು.

ಈ ಸಂದರ್ಭದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್‌ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಟಿ.ಎಂ.ನಿವೇದಿತಾ, ಜಿ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್. ಭಾಗ್ಯಲಕ್ಷ್ಮಿ, ಕೆ.ಎಂ. ನೀಲಕಂಠಯ್ಯ, ಜಿ.ಜೆ. ಸಂತೋಷ್ ಕುಮಾರ್, ಆರ್.ಚೌಡಪ್ಪ, ಎಲ್. ನಾಗರಾಜ್, ಟಿ.ಎಚ್.ಮಧುಸೂಧನ್, ಕೆ.ಎಂ.ರಾಘವೇಂದ್ರ, ನಗರದ ಎಲ್ಲ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಮತ್ತು ವ್ಯವಸ್ಥಾಪಕರು ಇದ್ದರು.

ವಿ.ಟಿ.ಅನಿತಾ ಪ್ರಾರ್ಥಿಸಿದರೆ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ ನಿರೂಪಿಸಿದರು. ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ ವಂದಿಸಿದರು.