ಪಾಕ್ ಶೆಲ್‌ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ

| N/A | Published : May 11 2025, 01:19 AM IST / Updated: May 11 2025, 10:47 AM IST

ಸಾರಾಂಶ

ನೋಡನೋಡುತ್ತಲೇ ''ಉರಿ' ಯಲ್ಲಿ ಹುರಿದು ಹೋದವು ಪಾಕಿಸ್ತಾನದ ಪಟಾಕಿಗಳು (ಡ್ರೋನ್). ಅಳಿದುಳಿದು ಸಿಡಿದ ಶೆಲ್‌ಗಳು ಉರಿಯಲ್ಲಿ ಹಲವು ಮನೆಗಳನ್ನು ದ್ವಂಸ ಮಾಡಿದವು.

ಡೆಲ್ಲಿ ಮಂಜು

  ಉರಿ/ ಬಾರಾಮುಲ್ಲಾ (ಜಮ್ಮು-ಕಾಶ್ಮೀರ) : ನೋಡನೋಡುತ್ತಲೇ ''ಉರಿ' ಯಲ್ಲಿ ಹುರಿದು ಹೋದವು ಪಾಕಿಸ್ತಾನದ ಪಟಾಕಿಗಳು (ಡ್ರೋನ್). ಅಳಿದುಳಿದು ಸಿಡಿದ ಶೆಲ್‌ಗಳು ಉರಿಯಲ್ಲಿ ಹಲವು ಮನೆಗಳನ್ನು ದ್ವಂಸ ಮಾಡಿದವು. ಇತ್ತ ಪ್ರಾಣ ಉಳಿಸಿಕೊಳ್ಳಲು ಹೋದ ಕಾಶ್ಮಿರದ ಮಹಿಳೆಯ ಕತ್ತು ಸೀಳಿ ದಾರುಣವಾಗಿ ಪಾಪಿ ಪಾಕಿಸ್ತಾನದ ಶೆಲ್‌ಗಳು ಪ್ರಾಣ ತೆಗೆದಿವೆ.

ಝೀಲಮ್ ಎಡದಂಡೆಯಲ್ಲಿರುವ ಭಾರತದ ಕೊನೆಯ ಪಟ್ಟಣ ಉರಿ. ನಮ್ಮ ಗಡಿ ಕಾಯುವ ಯೋಧರು ನೆಲೆಗಳು ಇರುವ ಜಾಗವೂ ಕೂಡ. ಭಯೋತ್ಪಾದನೆ ಪೀಡಿತ ಜಿಲ್ಲೆ ಎಂಬ ಅಣೆಪಟ್ಟಿ ಇದರ ಜೊತೆಗಿದ್ದು, ಈ ಅಣೆಪಟ್ಟಿಯೇ ಇಲ್ಲಿನ ಜನರ ಜೀವ ತೆಗೆಯುತ್ತಿದೆ, ಬದುಕು ಅಳಿಸುತ್ತಿದೆ.

ಕುತೂಹಲವೆಂದರೆ, ಪಾಕಿಸ್ತಾನದಿಂದ ಸಿಡಿಯುವ ಹಾಗೂ ಸಿಡಿದ ಬಹುತೇಕ ಶೆಲ್‌ಗಳು ಉರಿ, ಬಾಂಡಿಯ ಕಣಿವೆಯಲ್ಲೇ ಚುಚ್ಚಿಕೊಂಡಿವೆ. ಭಾರತ ಪಾಕಿಸ್ತಾನದ ವಾಯುನೆಲೆಯಲ್ಲಿ ಬಾನಗಡಿ ಮಾಡಿದರೆ, ಪಾಕಿಸ್ತಾನ ಎಂದಿನಂತೆ ನಿನ್ನೆ ರಾತ್ರಿಯೂ ಡ್ರೋನ್‌ಗಳನ್ನು ಬಿಟ್ಟು, ಶೆಲ್ ಫೈರಿಂಗ್ ಮಾಡಿ ಕಣಿಯಲ್ಲಿ ಆತಂಕ ಸೃಷ್ಟಿಸಿದೆ.

ಇಲ್ಲಿ ಉರಿ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಮನೆಗಳಿವೆ ಆದರೆ, ಅದರೊಳಗೆ ಜನರಿಲ್ಲ. ನಮ್ಮ‌ ಸೇನಾನೆಲೆಗಳನ್ನು ಗುರಿ ಮಾಡಿಕೊಂಡು ಪಾಕಿಸ್ತಾನದಿಂದ ತೂರಿ ಬಂದು ಸ್ಫೋಟಗೊಳ್ಳುವ ಶೆಲ್‌ಗಳು ಉರಿಯಲ್ಲಿ ಹಲವರ ಮನೆಗಳು ಧ್ವಂಸ ಮಾಡಿವೆ. ಮನೆಯವರನ್ನು ಮನೆಯ ಯಜಮಾನನ ಜೀವನ ಮೂರಾಬಟ್ಟೆ ಮಾಡಿ ದಿಕ್ಕುತೋಚ ದಂತೆ ಕೂರಿಸಿಬಿಟ್ಟಿವೆ ಪಾಕ್‌ಶೆಲ್‌ಗಳು

ನಿನ್ನೆ ಇದ್ದ ಮನೆ ಇಂದಿಲ್ಲ:

ಉರಿಗೆ ಅಂಟಿಕೊಂಡೇ ಇರುವ ಬಾಂಡಿ ಗ್ರಾಮದ ಪ್ರವೇಶದಲ್ಲೇ ಬೆಳಗಿನ ಜಾವ ತೂರಿ ಬಂದ ಶೆಲ್ ಗಳು ಮನೆಗಳನ್ನು ದ್ವಂಸ ಮಾಡಿವೆ. ಅದೃಷ್ಟವೆಂದರೆ ಮನೆಯ ನಿವಾಸಿಗಳು ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಮನೆಯ ನಿವಾಸಿಗಳು ಮನೆಗೆ ಬೀಗ ಹಾಕಿ ಪಕ್ಕದಲ್ಲೇ ಇದ್ದ ಬಾರಾಮುಲ್ಲಾದ ನೆಂಟರ ಮನೆಗೆ ಬಂದಿದ್ದರು. ಶೆಲ್‌ಗಳ ಸದ್ದು ನಿಂತ ಬಳಿಕ ಬಂದು ಇತ್ತ ಧಾವಿಸಿ ತಮ್ಮ ಮನೆ ನೋಡಿದರೆ ಅದು ಪೂರ್ತಿಯಾಗಿ ನಾಶವಾಗಿ ಹೋಗಿತ್ತು. ಇದನ್ನು ಕಂಡ ಮನೆಯ ಮಾಲೀಕ ಮತ್ತು ಕುಟುಂಬದವರು ಕಂಗಾಲಾಗಿ ಹೋಗಿದ್ದಾರೆ. ಶೆಲ್ ದಾಳಿಯ ವೇಳೆಯಲ್ಲಿ ಮನೆಯಲ್ಲಿ ಇರಲಿಲ್ಲ ಅನ್ನುವುದೇ ಅದೃಷ್ಟದ ಸಂಗತಿಯಾದರೂ ಮನೆಯನ್ನು ಪಾಕ್ ಶೆಲ್‌ಗಳು ಹೀಗೆ ಉರಿದು ಮುಕ್ಕಿದ್ದು ಮಾತ್ರ ತೀವ್ರ ನೋವಿನ ಸಂಗತಿ.

ನಾನು ಸಣ್ಣ ರೈತ ಎನ್ನುವ ಮನೆಯ ಮಾಲೀಕ ಅಬ್ದುಲಾ, ತಾನು ಸಾಕಿದ್ದ ಕೋಳಿಗಳನ್ನು ಕೂಡ ಪಾಕ್ ಶೆಲ್ ಗಳು ಕಿತ್ತುಕೊಂಡು ಹೋದವು. ನನ್ನ ಮನೆ ನಾಶವಾಯ್ತು. ಮುಂದೇನು ಎನ್ನುವ ಪ್ರಶ್ನೆ ತಲೆದೋರಿದೆ. ಸರ್ಕಾರ ನಮ್ಮ ಪರವಾಗಿ ನಿಲ್ಲುವುದೋ, ಇಲ್ಲವೋ ಗೊತ್ತಿಲ್ಲ ಎಂದು ಅಲವತ್ತುಗೊಳ್ಳುತ್ತಾರೆ.

ಇನ್ನು, ಇದೀಗ ಪೂರ್ತಿಯಾಗಿ ಉರಿ ಬಂದ್ ಆಗಿದೆ. ಶೇಕಡಾ 90 ರಷ್ಡು ಮಂದಿ ಮನೆಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ. ಸತತ ಶೆಲ್ ಸಿಡಿಯುವಿಕೆಯಿಂದ ರಕ್ಷಣೆ ಪಡೆಯಲು ಬಾರಾಮುಲ್ಲಾ ಸೇರಿದಂತೆ ಹೊರಗಡೆ ಹೋಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಕತ್ತು ಸೀಳಿತು ಸೀಸ!:

ಹಾಗೆ ಪಾಕ್‌ನಿಂದ ಹಾರಿದ ಶೆಲ್‌ಗಳ ತುಣುಕುಗಳು ಸ್ಕಾರ್ಫಿಯೋ ವಾಹನದ ಟಾಪ್ ಸೀಳಿಕೊಂಡು ಬಂದು, ಒಳಗೆ ಕುಳಿತ್ತಿದ್ದ ಮಹಿಳೆಯ ಕತ್ತು ಸೀಳಿ ಕೊಂದಿದೆ. ಶೆಲ್ ದಾಳಿ ಶುರುವಾದ ಕೂಡಬಂಡಿ ಸಮೀಪವಿದ್ದ ನರ್ಗೀಸ್ ಬೇಗಂ, ತನ್ನ ಕುಟುಂಬ ಸದಸ್ಯರೊಂದಿಗೆ ಸ್ಕಾರ್ಪಿಯೋ ವಾಹನದಲ್ಲಿ ಸಮೀಪದ ಸಂಬಂಧಿಕರ ಮನೆಗೆ ಹೊರಟು, ಅದಾಗಲೇ ಎರಡು ಕಿಲೋಮೀಟರ್ ಹಾದಿ ಮುಗಿಸಿದ್ದರು. ಆದರೆ ಏಕಾಏಕಿ ಶೆಲ್ ದಾಳಿ ನಡೆದು ಅದರಿಂದ ಸ್ಫೋಟಗೊಂಡ ಸೀಸ ನೇರವಾಗಿ ಬೇಗಂ ಅವರ ಕೆನ್ನೆ, ಕುತ್ತಿಗೆ ಸೀಳಿದೆ. ಏನಾಯ್ತು ಅನ್ನುವ ಹೊತ್ತಿಗೆ ಬೇಗಂ ಪ್ರಾಣಪಕ್ಷಿ ಹಾರಿಹೋಗಿತ್ತು!

‘ಮೋದಿಜೀ ನಮ್ಮ ಅಮ್ಮನನ್ನು ತಂದು ಕೊಡಿ, ಅಮ್ಮ ಇಲ್ಲದ ಮನೆಗೆ ಹೋಗುವುದು ಹೇಗೆ?’ ಅಂತ ಮಕ್ಕಳು ಕಣ್ಣೀರು ಹಾಕುತ್ತಿದ್ದ ದೃಶ್ಯವಂತೂ ಮನಕಲಕುತ್ತಿತ್ತು. ಬಾರಾಮುಲ್ಲಾದ ಸಂಬಂಧಿಕರೇ ಮನೆಯೇ ಈಗ ನಮಗೆ ಆಶ್ರಯವಾಗಿದೆ. ಬದುಕು ಮುರಾಬಟ್ಟೆ ಆಗಿದೆ ಅಂಥ ‘ಕನ್ನಡಪ್ರಭ’ದ ಜೊತೆ ನೋವು ತೋಡಿಕೊಂಡಿದ್ದಾನೆ ನರ್ಗೀಸ್ ಬೇಗಂ ಪುತ್ರ.

ಚಿತ್ರ: ಪಾಕ್‌ ಶೆಲ್‌ಗಳು ದಾಳಿಗೆ ಉರಿಯಲ್ಲಿ ನಾಮಾವಶೇಷವಾಗಿರುವ ಮನೆ.