ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 236 ತಾಲೂಕುಗಳ ಪೈಕಿ 215 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.ಪ್ರಸಕ್ತ ಮುಂಗಾರು ಅವಧಿಯಲ್ಲಿ ಶೇ.18ರಷ್ಟು ಹಾಗೂ ಹಿಂಗಾರು ಅವಧಿಯಲ್ಲಿ ಶೇ.36ರಷ್ಟು ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ನದಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ಅಂತರ್ಜಲ ಬಳಕೆ ಪ್ರಮಾಣ ಹೆಚ್ಚಾಗಿದೆ. ಜತೆಗೆ ಅಂತರ್ಜಲ ಮರುಪೂರಣದಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ, ರಾಜ್ಯದ 215 ತಾಲೂಕುಗಳಲ್ಲಿ ಕಳೆದ 2022ರ ಡಿಸೆಂಬರ್ ಅವಧಿಗೆ ಹೋಲಿಕೆ ಮಾಡಿದರೆ 2023ರ ಡಿಸೆಂಬರ್‌ನಲ್ಲಿ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.ರಾಜ್ಯದ 236 ತಾಲೂಕುಗಳಲ್ಲಿ ಒಟ್ಟು 1,784 ಅಧ್ಯಯನ ಕೊಳವೆ ಬಾವಿಗಳನ್ನು ರಾಜ್ಯ ಅಂತರ್ಜಲ ನಿರ್ದೇಶನಾಲಯವು ಹೊಂದಿದೆ. ಅವುಗಳ ಮೂಲಕ ಪ್ರತಿ ತಿಂಗಳು ಅಂತರ್ಜಲ ಮಟ್ಟವನ್ನು ದಾಖಲಿಸಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟದಲ್ಲಿ ಸರಾಸರಿ ನೀರಿನ ಮಟ್ಟವನ್ನು ಲೆಕ್ಕ ಹಾಕಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಅಂತರ್ಜಲ ಕುಸಿತಗೊಂಡಿರುವ 215 ತಾಲೂಕುಗಳ ಪೈಕಿ ಬರೋಬ್ಬರಿ 100 ತಾಲೂಕುಗಳಲ್ಲಿ 13 ಅಡಿಗಿಂತ ಹೆಚ್ಚು ಅಂತರ್ಜಲ ಕುಸಿದಿದೆ. ಕೆಲವೆಡೆ ಬೋರ್‌ವೆಲ್‌ಗಳು ಸಂಪೂರ್ಣ ಖಾಲಿಯಾಗಿ ಒಣಗಿವೆ. 53 ತಾಲೂಕುಗಳಲ್ಲಿ 6 ಅಡಿಯಿಂದ 13 ಅಡಿವರೆಗೆ ಕುಸಿತಗೊಂಡಿದೆ. 62 ತಾಲೂಕಿಗಳಲ್ಲಿ 6 ಅಡಿವರೆಗೆ ಕುಸಿತಗೊಂಡಿದೆ.ರಾಜ್ಯದ 236 ತಾಲೂಕುಗಳ ಪೈಕಿ ಕೇವಲ 24 ತಾಲೂಕುಗಳಲ್ಲಿ ಸರಾಸರಿ ಮಟ್ಟಕ್ಕಿಂತ ಹೆಚ್ಚಿನ ಅಂತರ್ಜಲ ಮಟ್ಟ ಇರುವುದು ಕಂಡುಬಂದಿದೆ. 16 ತಾಲೂಕುಗಳಲ್ಲಿ 6 ಅಡಿವರೆಗೆ ಹಚ್ಚಾಗಿದೆ. 2 ತಾಲೂಕಿನಲ್ಲಿ 6 ರಿಂದ 13 ಅಡಿವರೆಗೆ ಅಧಿಕವಾಗಿದೆ. 4 ತಾಲೂಕುಗಳಲ್ಲಿ ಮಾತ್ರ 13 ಅಡಿಗಿಂತ ಹೆಚ್ಚಿನ ಪ್ರಮಾಣದ ಅಂತರ್ಜಲ ಮಟ್ಟ ಇರುವುದು ಕಂಡುಬಂದಿದೆ.ಡಿಸೆಂಬರ್ ವೇಳೆಗೆ ಸಾಕಷ್ಟು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಮುಂಬರುವ ಬೇಸಿಗೆ ಅವಧಿಯಲ್ಲಿ ಅಂತರ್ಜಲ ಬಳಕೆ ಇನ್ನಷ್ಟು ಹೆಚ್ಚಾಗಲಿದ್ದು, ಆಗ ಮತ್ತಷ್ಟು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ.
ಕಳೆದ 10 ವರ್ಷದ ಸರಾಸರಿ ಗಮನಿಸಿದರೆ ರಾಜ್ಯದ 119 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. 117 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ನಿಗದಿತ ಮಟ್ಟ ಹಾಗೂ ಅದಕ್ಕಿಂತ ಹೆಚ್ಚಾಗಿದೆ. 28 ತಾಲೂಕುಗಳಲ್ಲಿ 12 ಅಡಿಗಿಂತ ಹೆಚ್ಚು ಕುಸಿತಗೊಂಡಿದೆ ಹಾಗೂ ಸಂಪೂರ್ಣ ಖಾಲಿಯಾಗಿ ಒಣಗಿವೆ. 30 ತಾಲೂಕುಗಳಲ್ಲಿ 6 ಅಡಿಯಿಂದ 13 ಅಡಿವರೆಗೆ ಕುಸಿತಗೊಂಡಿದೆ. 61 ತಾಲೂಕಿಗಳಲ್ಲಿ 6 ಅಡಿವರೆಗೆ ಕುಸಿತಗೊಂಡಿದೆ. 43 ತಾಲೂಕುಗಳಲ್ಲಿ ಸುಮಾರು 6 ಅಡಿಯಷ್ಟು ಮರುಪೂರಣಗೊಂಡಿವೆ. 22 ತಾಲೂಕುಗಳಲ್ಲಿ 6 ರಿಂದ 13 ಅಡಿಯಷ್ಟು ಹೆಚ್ಚಾಗಿದೆ. 52 ತಾಲೂಕುಗಳಲ್ಲಿ 13 ಅಡಿಗಿಂತ ಹೆಚ್ಚು ಹಾಗೂ ಸಂಪೂರ್ಣವಾಗಿ ಮರುಪೂರಣವಾಗಿರುವುದು ಕಂಡುಬಂದಿದೆ.